ಐಸಿಸಿ T-20 ವಿಶ್ವಕಪ್:
ನ್ಯೂಝಲೆಂಡ್‌ಗೆ ಐದು ವಿಕೆಟ್ ಅಂತರದ ರೋಚಕ ಜಯ

ಅಬುಧಾಬಿ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಬುಧವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ
ಇಂಗ್ಲೆಂಡ್ ವಿರುದ್ಧ ಐದು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿರುವ ನ್ಯೂಝಿಲೆಂಡ್ ಫೈನಲ್‌ಗೆ ಲಗ್ಗೆಯಿಟ್ಟಿದೆ.
ಈ ಮೂಲಕ 2019ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಎದುರಾದ ಸೋಲಿಗೆ ಸೇಡು ತೀರಿಸಿಕೊಂಡಿದೆ.
ಈಗ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಎರಡನೇ ಸೆಮಿಫೈನಲ್‌ನ ವಿಜೇತ ತಂಡದ ಸವಾಲನ್ನು ಎದುರಿಸಲಿದೆ. ಗುರುವಾರ ನಡೆಯಲಿರುವ ಎರಡನೇ ಸೆಮಿಫೈನಲ್ ಮುಖಾಮುಖಿಯಲ್ಲಿ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಣಸಲಿವೆ.
ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್, ಮೋಯಿನ್ ಅಲಿ (51*) ಹಾಗೂ ಡೇವಿಡ್ ಮಲಾನ್ (42) ಉಪಯುಕ್ತ ಆಟದ ನೆರವಿನಿಂದ ನಾಲ್ಕು ವಿಕೆಟ್ ನಷ್ಟಕ್ಕೆ 166 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು.
ಬಳಿಕ ಗುರಿ ಬೆನ್ನತ್ತಿದ ನ್ಯೂಝಿಲೆಂಡ್ ಡೆರಿಲ್ ಮಿಚೆಲ್ (72*), ಡೆವೊನ್ ಕಾನ್ವೆ (46)ಹಾಗೂ ಜೇಮ್ಸ್ ನೀಶಮ್ (27) ದಿಟ್ಟ ಹೋರಾಟದ ಬೆಂಬಲದೊಂದಿಗೆ ಇನ್ನು ಆರು ಎಸೆತಗಳು ಬಾಕಿ ಉಳಿದಿರುವಂತೆಯೇ ಐದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.