ಮನೆಗೆ ಬೆಂಕಿ ಬಿದ್ದು ನಿವೃತ್ತ ಐಪಿಎಸ್ ಅಧಿಕಾರಿ ಮೃತ್ಯು, ಪತ್ನಿ- ಪುತ್ರ ಗಂಭೀರ
ಲಕ್ನೋ: ಮನೆಗೆ ಬೆಂಕಿ ಬಿದ್ದ ಪರಿಣಾಮ ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರು ಮೃತಪಟ್ಟು, ಪತ್ನಿ ಹಾಗೂ ಪುತ್ರ ಗಂಭೀರ ಗಾಯಗೊಂಡ ಘಟನೆ ಲಕ್ನೋದ ಇಂದಿರಾ ನಗರದಲ್ಲಿ ನಡೆದಿದೆ.
ನಿವೃತ್ತ ಐಪಿಎಸ್ ಅಧಿಕಾರಿ ದಿನೇಶ್ ಚಂದ್ರ ಪಾಂಡೆ ಮೃತಪಟ್ಟವರು. ಅವರ ಪತ್ನಿ ಅರುಣಾ ಮತ್ತು ಪುತ್ರ ಶಶಾಂಕ್ ಗಂಭೀರ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮನೆಯೊಳಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಮೂವರೂ ಹೊರಬರಲು ಯತ್ನಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಇಡೀ ಮನೆಯನ್ನು ಬೆಂಕಿ ಆವರಿಸಿಕೊಂಡಿದೆ.
ಇದರಿಂದ ಹೊರಬರಲು ಸಾಧ್ಯವಾಗದೇ ಮೂವರೂ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾರೆ. ವಿಷಯ ತಿಳಿದ ತತ್‌ಕ್ಷಣ ಇಂದಿರಾನಗರ ಅಗ್ನಿಶಾಮಕ ಠಾಣೆಯ ತಂಡವು ಕೂಡಲೇ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ.
ಅಲ್ಲದೆ ಕಟ್ಟಡದ ಮೊದಲ ಮಹಡಿಯಲ್ಲಿ ತಲುಪಿ ಸಿಲುಕಿದ್ದವರನ್ನು ಕರೆದಾಗ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಹೀಗಾಗಿ ಕಾರ್ಯಾಚರಣೆ ಆರಂಭಿಸಿ ಕೊಠಡಿಯಲ್ಲಿ ಬಿದ್ದಿದ್ದ ದಿನೇಶ್‌ಚಂದ್ರ ಪಾಂಡೆ, ಪತ್ನಿ, ಪುತ್ರನನ್ನು ಹೊರ ತೆಗೆದು ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದಾರೆ.
ಆದರೆ ಆ ವೇಳೆಗಾಗಲೇ ದಿನೇಶ್‌ಚಂದ್ರ ಪಾಂಡೆ ಮೃತಪಟ್ಟಿದ್ದರು. ಉಳಿದಿಬ್ಬರು ಗಂಭೀರ ಸ್ಥಿತಿಯಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.




