ಉಡುಪಿ: ಕೇರಳದ ಕಾರಾಗೃಹದಿಂದ ತಪ್ಪಿಸಿಕೊಂಡಿದ್ದ ಆರೋಪಿ ಉಡುಪಿಯಲ್ಲಿ ಅರೆಸ್ಟ್
ಕೇರಳ ರಾಜ್ಯದ ತಿರುವನಂತಪುರ ಗ್ರಾಮಾಂತರ ಠಾಣೆಯಲ್ಲಿ ಕೊಲೆ ಹಾಗೂ ಅತ್ಯಾಚಾರ ಪ್ರಕರಣದ ಆರೋಪಿಯನ್ನು ಉಡುಪಿ ಜಿಲ್ಲೆಯ ಕೋಟದಲ್ಲಿ ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನು ತಿರುವನಂತಪುರಂನ ರಾಜೇಶ್(39) ಎಂದು ಗುರುತಿಸಲಾಗಿದೆ.
ರಾಜೇಶ್ ಕೊಲೆ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿದ್ದು, 2012ರಲ್ಲಿ ತಿರುವಂತಪುರಂ ಗ್ರಾಮಾಂತರ ಜಿಲ್ಲೆಯ ವಾಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಎನ್ನಲಾಗಿದೆ.
ಈ ಬಗ್ಗೆ ನ್ಯಾಯಾಲಯವು ತ್ವರಿತಗತಿಯಲ್ಲಿ ವಿಚಾರಣೆ ನಡೆಸಿ 2013ರಲ್ಲಿ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು, ನಂತರ ಜೀವಾವಧಿ ಶಿಕ್ಷೆಯಾಗಿ ಮಾರ್ಪಾಡು ಮಾಡಲಾಗಿತ್ತು. ತಿರುವಂತಪುರಂ ಕೇಂದ್ರ ಕಾರಾಗೃಹದಲ್ಲಿ ಇದ್ದ ಈತನನ್ನು ನಂತರ ನೆಟ್ಟು ಕತಾರಿ ಬಯಲು ಜೈಲಿಗೆ ವರ್ಗಾಯಿಸಲಾಗಿತ್ತು. 2020ರ ಡಿ.23 ರಂದು ಈತ ನೆಟ್ಟು ಕತಾರಿ ಬಯಲು ಜೈಲಿ ನಿಂದ ಪರಾರಿಯಾಗಿದ್ದನು. ಈ ಬಗ್ಗೆ ನೇಯಾರ್ ಡ್ಯಾಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಲಾಗಿತ್ತು.
ಇನ್ನು ಜೈಲಿನಿಂದ ಪರಾರಿಯಾಗಿದ್ದ ರಾಜೇಶ್ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಸದ್ಯ ಈತ ಉಡುಪಿಯಲ್ಲಿ ವಾಸವಾಗಿರುವ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ನೇತೃತ್ವದ ತಂಡ ಆರೋಪಿಯನ್ನು ಬ್ರಹ್ಮಾವರ ತಾಲ್ಲೂಕಿನ ಬಿಲ್ಲಾಡಿ ಗ್ರಾಮದ ಕಬ್ಬಿನ ಹಿತ್ಲು ಎಂಬಲ್ಲಿ ವಶಕ್ಕೆ ಪಡೆದು ಕೇರಳ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೇರಳ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಕುಂದಾಪುರ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ.





