ಗಂಗೊಳ್ಳಿ ರೌಡಿಶೀಟರ್ ಸುಭಾನ್ ಗಡಿಪಾರು ಆದೇಶ
ಕುಂದಾಪುರ: ರೌಡಿ ಶೀಟರ್ ಹಾಗೂ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಗಂಗೊಳ್ಳಿಯ ಜಾಮೀಯ ಮೊಹಲ್ಲಾ ಮೀನು ಮಾರುಕಟ್ಟೆ ಬಳಿಯ ನಿವಾಸಿ ಮುಹಮ್ಮದ್ ಸುಭಾನ್ (25) ಎಂಬಾತನನ್ನು ಆರು ತಿಂಗಳ ಕಾಲ ಗಡಿಪಾರು ಮಾಡಿ ಕುಂದಾಪುರ ಉಪವಿಭಾಗ ದಂಡಾಧಿಕಾರಿ ಅ.17 ರಂದು ಆದೇಶ ಹೊರಡಿಸಿದ್ದಾರೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಮಚ್ಚೀಂದ್ರ ಹಾಕೆ ತಿಳಿಸಿದ್ದಾರೆ.
ಈತನು ರೌಡಿಯಾಗಿದ್ದು ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. 20ನೇ ವಯಸ್ಸಿನಲ್ಲಿಯೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಲು ಪ್ರಾರಂಭಿಸಿದ್ದು, ಸಹಚರರೊಂದಿಗೆ ಸೇರಿ ತಂಡ ಕಟ್ಟಿಕೊಂಡು, ಹೊಡೆದಾಟ, ದನ ಕಳ್ಳತನ, ಜಾನುವಾರು ಸಾಗಾಟ ಮತ್ತು ಹಿಂಸೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.
6 ತಿಂಗಳ ಒಳಗೆ ಅನುಮತಿ ಪಡೆಯದೆ ಕುಂದಾಪುರ ಪೊಲೀಸ್ ಉಪವಿಭಾಗದಲ್ಲಿ ಕಂಡು ಬಂದಲ್ಲಿ ಈತನನ್ನು ಬಂಧಿಸುವಂತೆ ಗಂಗೊಳ್ಳಿ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಿಗೆ ಆದೇಶ ಮಾಡಿದ್ದಾರೆ.




