ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಕಾರನ್ನು ಅಡ್ಡಗಟ್ಟಿದ ಪ್ರಕರಣ: ಆರೋಪಿಯ ಮನೆಯಲ್ಲಿ ಪೊಲೀಸರಿಂದ ಪರಿಶೀಲನೆ- ಫೋನ್, ಒಂದು “ಸ್ಪ್ಯಾನರ್ ರಾಡ್ ವ್ರೆಂಚ್” ವಶಕ್ಕೆ
ಬಂಟ್ವಾಳ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಕಾರಿಗೆ ಯಾರೋ ಕಿಡಿಗೇಡಿಗಳು ಅಡ್ಡಗಟ್ಟಿ ತಲವಾರು ಝಳಪಿಸಿದ್ದರು ಎಂದು ಆರೋಪಿಸಲಾಗಿದ ಘಟನೆ ಮಂಗಳೂರು ನಗರ ಹೊರವಲಯದ ಫರಂಗಿಪೇಟೆ ಎಂಬಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳ ನಿವಾಸದಲ್ಲಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
ಆರೋಪಿಗಳಿಂದ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಸ್ಕಾರ್ಪಿಯೊದಿಂದ ಒಂದು “ಸ್ಪ್ಯಾನರ್ ರಾಡ್ ವ್ರೆಂಚ್” (ವಾಹನದಲ್ಲಿ ಬಳಸುವ ಉಪಕರಣ) ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ದೂರುದಾರರಿಗೆ ಬೆದರಿಕೆ ಹಾಕಲು ಸ್ಪ್ಯಾನರ್ (ಹೊಳೆಯುವ ಎಲ್ ಆಕಾರದ ಉಪಕರಣ) ಬಳಸಿದ್ದರು. ದೂರುದಾರರನ್ನು ನಿಂದಿಸುವಾಗ ಸ್ಪ್ಯಾನರ್ ಬೀಸಿದ್ದಾರೆ ಎಂದು ತನಿಖೆ ವೇಳೆ ತಿಳಿದು ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ..
ಅ.13 ರಂದು ರಾತ್ರಿ ವೇಳೆಗೆ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿ ಅಲ್ಲಿಂದ ಬೆಳ್ತಂಗಡಿಗೆ ತೆರಳುತ್ತಿದ್ದ ಶಾಸಕ ಹರೀಶ್ ಪೂಂಜಾ ಅವರು ತನ್ನ ಕಾರು ಬಿಟ್ಟು ಸಂಬಂಧಿಯೋರ್ವರ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಅವರನ್ನು ಪಡೀಲ್ ನಿಂದ ಫರಂಗಿಪೇಟೆ ಯವರೆಗೆ ಬೆನ್ನಟ್ಟಿದ್ದು, ಫರಂಗಿಪೇಟೆ ಯಲ್ಲಿ ಕಾರು ಸೈಡ್ ಹಾಕುತ್ತಿದ್ದಂತೆಯೇ ಅವಾಚ್ಯ ಶಬ್ದದಿಂದ ಬೈದು ತಲವಾರು ಝಳಪಿಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.






