ಬೆಳ್ತಂಗಡಿ: ಗೂಡ್ಸ್ ಅಟೋರಿಕ್ಷಾದಲ್ಲಿ ಗಾಂಜಾ ಸಾಗಾಟ, ವಾಹನ ಸಹಿತ ಗಾಂಜಾ ವಶ
ಬೆಳ್ತಂಗಡಿ: ಗೂಡ್ಸ್ ಅಟೋರಿಕ್ಷಾದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 805 ಗ್ರಾಂ ತೂಕದ ಮಾದಕ ಗಾಂಜಾ ಹಾಗೂ ಸಾಗಾಟಕ್ಕೆ ಉಪಯೋಗಿಸಿದ ಅಂದಾಜು 2 ಲಕ್ಷ ರೂ. ಮೌಲ್ಯದ ವಾಹನವನ್ನು ಬೆಳ್ತಂಗಡಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕ ಶಿವಕುಮಾರ ಬಿ. ಅವರು ಸಿಬಂದಿಯೊಂದಿಗೆ ಬೆಳ್ತಂಗಡಿಯ ತೆಂಕಕಾರಂದೂರು ಗ್ರಾಮದ ಉದಯಗಿರಿಯಲ್ಲಿ ಶುಕ್ರವಾರ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಗುರುವಾಯನಕೆರೆಯಿಂದ ನಾರಾವಿ ಕಡೆಗೆ ಗೂಡ್ಸ್ ಅಟೋರಿಕ್ಷಾದಲ್ಲಿ ಗಾಂಜಾವನ್ನು ಅಕ್ರಮವಾಗಿ ಸಾಗಿಸುತ್ತಿರುವುದು ಪತ್ತೆಯಾಗಿತ್ತು.
ಮಂಜೇಶ್ವರದ ಮಹಮ್ಮದ್ ಅಶ್ರಫ್ (34) ಹಾಗೂ ಅಬ್ದುಲ್ ಲತೀಫ್ ಕೆ. (36) ಎಂಬ ಇಬ್ಬರು ಆರೋಪಿಗಳು ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದು, ಆರೋಪಿಗಳಿಂದ 30 ಸಾವಿರ ರೂ. ಮೌಲ್ಯದ 805 ಗ್ರಾಂ ತೂಕದ ಗಾಂಜಾ ಹಾಗೂ ಅಂದಾಜು 2 ಲಕ್ಷ ರೂ. ಮೌಲ್ಯದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.
ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ್ ಸೋನವಣೆ ಹಾಗೂ ಹೆಚ್ಚುವರಿ ಪೊಲೀಸ್ ಆಧೀಕ್ಷಕ ಡಾ. ಕುಮಾರಚಂದ್ರ ಅವರ ನಿರ್ದೇಶನದಂತೆ ಬಂಟ್ವಾಳ ಡಿವೈಎಸ್‌ಪಿ ಪ್ರತಾಪ್ ಸಿಂಗ್ ತೊರಾಟ್ ಅವರ ಸೂಚನೆಯಂತೆ ಬೆಳ್ತಂಗಡಿ ವೃತ್ತ ನಿರೀಕ್ಷಕ ಶಿವಕುಮಾರ ಬಿ. ಹಾಗೂ ವೇಣೂರು ಠಾಣಾ ಪಿಎಸ್ಐ ಸೌಮ್ಯ ಜೆ. ಮತ್ತು ವೃತ್ತ ಕಚೇರಿಯ ಅಪರಾಧ ಪತ್ತೆ ತಂಡದ ಸಿಬಂದಿಯಾದ ಇಬ್ರಾಹಿಂ, ಚೌಡಪ್ಪ, ಸುನಿಲ್ ಹಪ್ಪಳ್ಳಿ, ಮತ್ತು ಜೀಪು ಚಾಲಕ ಮಹಮ್ಮದ್ ಅಸೀಫ್, ಲಾರೆನ್ಸ್ ಹಾಗೂ ವೇಣೂರು ಠಾಣಾ ಸಿಬಂದಿಯಾದ ಎಎಸ್ಐ ವೆಂಕಟೇಶ್ ನಾಯ್ಕ್, ರವೀಂದ್ರ, ಪಂಪಾಪತಿ, ಕೇಶವತಿ, ಶಶಿಕುಮಾರ್, ಶ್ರೀನಿವಾಸ, ತ್ರಿಮೂರ್ತಿ, ಹನುಮಂತ, ಲತಾ ಭಾಗವಹಿಸಿದ್ದರು.