February 3, 2026

ಪೊಲೀಸರು, ಗಣಿಗಾರಿಕೆ ನಡೆಸುತ್ತಿದ್ದವರ ನಡುವೆ ಗುಂಡಿನ ಚಕಮಕಿ: ಬಿಜೆಪಿ ನಾಯಕನ ಪತ್ನಿ ಸಾವು, ಐವರು ಪೊಲೀಸರಿಗೆ ಗಾಯ

0
image_editor_output_image686673158-1665643872607.jpg

ಡೆಹ್ರಾಡೂನ್: ಗಣಿಗಾರಿಕೆ ನಡೆಯುತ್ತಿದ್ದ ಸ್ಥಳದಲ್ಲಿ ಪೊಲೀಸರು ಮತ್ತು ಗಣಿಗಾರಿಕೆ ನಡೆಸುತ್ತಿದ್ದವರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮಹಿಳೆಯೊಬ್ಬರು ಗುಂಡು ತಾಗಿ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಮೊರಾದಾಬಾದ್‌ನ ಐವರು ಪೊಲೀಸರು ಗಾಯಗೊಂಡ ಘಟನೆ ಉತ್ತರಾಖಂಡದ ಜಸ್ಪುರ್‌ನಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಬಿಜೆಪಿ ನಾಯಕ ಗುರ್ತಾಜ್ ಭುಲ್ಲರ್ ಅವರ ಪತ್ನಿ ಗುರುಪ್ರೀತ್ ಕೌರ್ (28) ಎಂದು ಗುರುತಿಸಲಾಗಿದೆ. ಪೊಲೀಸರು ಮತ್ತು ಗಣಿ ಮಾಫಿಯಾದವರ ಮಧ್ಯೆ ನಡೆದ ಗುಂಡಿನ ಚಕಮಕಿ ವೇಳೆ ಮಹಿಳೆ ಸಾವನ್ನಪ್ಪಿದ್ದಾರೆ.

ಜಫರ್‍ ಎಂಬಾತ ಗಣಿ ಮಾಫಿಯಾ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಆತನ ಬಂಧನಕ್ಕಾಗಿ ಮೊರಾದಾಬಾದ್ ಪೊಲೀಸರ ತಂಡವು ಉತ್ತರಾಖಂಡದ ಜಸ್ಪುರ್‌ಗೆ ತೆರಳಿತ್ತು. ಈ ವೇಳೆ ಗಣಿಗಾರಿಕೆ ನಡೆಸುತ್ತಿದ್ದವರು ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಐವರು ಪೊಲೀಸ್ ಸಿಬಂದಿ ಮೇಲೆ ಗುಂಡು ಹಾರಿಸಲಾಗಿದ್ದು, ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಆದರೆ ಕರ್ತವ್ಯ ಮುಗಿಸಿ ಅದೇ ದಾರಿಯಲ್ಲಿ ಮನೆಗೆ ಹಿಂತಿರುಗುತ್ತಿದ್ದ ಗುರುಪ್ರೀತ್ ಕೌರ್‌ ಅವರಿಗೆ ಗುಂಡು ತಗುಲಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಲ್ಲಿ ಆಕೆ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದರು.

ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ನಾಲ್ವರು ಪೊಲೀಸರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದು, ಉತ್ತರ ಪ್ರದೇಶ ಪೊಲೀಸರ ಮೇಲೆ ಉತ್ತರಾಖಂಡದಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಇಷ್ಟೆಲ್ಲಾ ಘಟನೆ ನಡೆದರೂ ಆರೋಪಿ ಜಾಫರ್‍ ಪರಾರಿಯಾಗಿದ್ದಾನೆ.

Leave a Reply

Your email address will not be published. Required fields are marked *

error: Content is protected !!