July 3, 2026

ಬಂಟ್ವಾಳ: ಬಸ್ ಬೇ ಬಳಸದೇ ರಾಷ್ಟ್ರೀಯ ಹೆದ್ದಾರಿ ಮಧ್ಯಭಾಗದಲ್ಲಿ ಬಸ್ ನಿಲುಗಡೆ: ಹೆಚ್ಚಿನ ಅಪಘಾತಕ್ಕೆ ಕಾರಣವಾಗುವ ಪರಿಸ್ಥಿತಿ-ಸಾರ್ವಜನಿಕರ ಆಕ್ರೋಶ

0
image_editor_output_image1632510050-1783062164848

ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಿಸಿರುವ ಬಸ್ ಬೇ ಗಳನ್ನು ಬಳಸದೆ, ಹೆದ್ದಾರಿ ಮಧ್ಯಭಾಗದಲ್ಲೇ ಬಸ್ಸುಗಳನ್ನು ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿ-ಇಳಿಸುವ ಪದ್ಧತಿ ಮುಂದುವರಿದಿದ್ದು, ಇದು ಗಂಭೀರ ಅಪಘಾತಗಳಿಗೆ ಕಾರಣವಾಗುವ ಆತಂಕವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.

ಬಿ ಸಿ ರೋಡಿನಿಂದ ಉಪ್ಪಿನಂಗಡಿವರೆಗಿನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚರಿಸುವ ಖಾಸಗಿ ಹಾಗೂ ಸರ್ಕಾರಿ ಬಸ್‌ಗಳ ಬಹುಪಾಲು, ನಿಗದಿತ ಬಸ್ ಬೇಗಳಿಗೆ ತೆರಳದೆ ಹೆದ್ದಾರಿಯ ಮುಖ್ಯ ಮಾರ್ಗದಲ್ಲೇ ಕೆಲ ಕ್ಷಣಗಳ ಕಾಲ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿ ಇಳಿಸುತ್ತಿವೆ.

ವೇಗವಾಗಿ ಸಂಚರಿಸುವ ಇತರ ವಾಹನಗಳ ನಡುವೆ ಬಸ್‌ಗಳು ಹಠಾತ್ ನಿಲ್ಲುವುದರಿಂದ ಹಿಂಬದಿಯಿಂದ ಬರುವ ವಾಹನಗಳಿಗೆ ಅಪಾಯ ಎದುರಾಗುತ್ತಿದ್ದು, ಇದರ ಪರಿಣಾಮ ಅಪಘಾತ ಸಂಭವಿಸುವ ಸಾಧ್ಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಹಲವು ಕಡೆ ಬಸ್ ಚಾಲಕರು ಈ ವ್ಯವಸ್ಥೆಯನ್ನು ಬಳಸದೇ ಇರುವುದರಿಂದ ಬಸ್ ಬೇಗಳು ನಿರುಪಯುಕ್ತವಾಗುತ್ತಿವೆ. ಇನ್ನೊಂದೆಡೆ, ಬಸ್ ಬೇಗಳು ಖಾಲಿಯಾಗಿರುವುದನ್ನು ದುರುಪಯೋಗಪಡಿಸಿಕೊಂಡು ಕೆಲವರು ಘನಗಾತ್ರದ ಲಾರಿಗಳು ಹಾಗೂ ಇತರ ವಾಹನಗಳನ್ನು ಅಲ್ಲೇ ನಿಲ್ಲಿಸುತ್ತಿದ್ದಾರೆ ಎಂಬ ಆರೋಪವೂ ಸಾರ್ವಜನಿಕರಿಂದ ಕೇಳಿಬಂದಿದೆ.

ಈ ಸಮಸ್ಯೆಗೆ ಬಸ್ ಚಾಲಕರು ಮಾತ್ರವಲ್ಲ, ಬಸ್ ಬೇಗಳಲ್ಲಿ ಅನಧಿಕೃತವಾಗಿ ವಾಹನ ನಿಲ್ಲಿಸುವವರ ಮೇಲೂ ಕಟ್ಟುನಿಟ್ಟಿನ ಕ್ರಮ ಅಗತ್ಯವಾಗಿದೆ. ಬಸ್ ಬೇಗಳ ಸಮರ್ಪಕ ಬಳಕೆಯನ್ನು ಖಚಿತಪಡಿಸಲು ಮತ್ತು ಹೆದ್ದಾರಿಯಲ್ಲಿ ಅಪಾಯಕಾರಿ ಬಸ್ ನಿಲುಗಡೆಗೆ ಕಡಿವಾಣ ಹಾಕಲು ಸಂಚಾರ ಪೊಲೀಸರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜಂಟಿಯಾಗಿ ವಿಶೇಷ ಕಾರ್ಯಾಚರಣೆ ನಡೆಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!