ವಿಟ್ಲ: ಅಪ್ರಾಪ್ತ ಬಾಲಕನಿಗೆ ಲೈಂಗಿಕ ದೌರ್ಜನ್ಯ: ಆರೋಪಿಯ ಬಂಧನ
ವಿಟ್ಲ: ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿ ಬೆದರಿಕೆ ಹಾಕಿದ ಆರೋಪದಡಿ ವಿಟ್ಲ ಪೊಲೀಸರು 53 ವರ್ಷದ ವ್ಯಕ್ತಿಯೊಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ವಿಟ್ಲ ಕೊಂಡಗಾಯಿ ನಿವಾಸಿ ಉಮೇಶ್ (53) ಎಂದು ಗುರುತಿಸಿ ಬಂಧಿಸಿದ್ದಾರೆ.
ಆ.15ರಂದು ಅಳಿಕೆಯಿಂದ ಪುತ್ತೂರು ಕಡೆಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಅಪ್ರಾಪ್ತ ಬಾಲಕನ ಪಕ್ಕದಲ್ಲಿ ವಿಟ್ಲದ ಖಾಸಗಿ ಬಸ್ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಕುಳಿತುಕೊಂಡಿದ್ದರು. ಪ್ರಯಾಣದ ವೇಳೆ ಬಾಲಕನೊಂದಿಗೆ ಅನುಚಿತವಾಗಿ ವರ್ತಿಸಿದ ಅವರು, ಬಳಿಕ ಬಾಲಕ ಮನೆಗೆ ತೆರಳಿದ ಸಂದರ್ಭ ಅಲ್ಲಿಗೂ ತೆರಳಿ ಲೈಂಗಿಕ ಕಿರುಕುಳ ನೀಡಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಬಾಲಕನ ಪರವಾಗಿ ನೀಡಲಾದ ದೂರಿನ ಆಧಾರದ ಮೇಲೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 179/2026ರಂತೆ ಪೋಕ್ಸೋ ಕಾಯ್ದೆ 2012ರ ಕಲಂ 4(2) ಹಾಗೂ ಬಿಎನ್‌ಎಸ್ 2023ರ ಕಲಂ 351(2)ರಡಿ ಪ್ರಕರಣ ದಾಖಲಾಗಿದೆ.
ಪ್ರಕರಣದ ತನಿಖೆ ನಡೆಸಿದ ವಿಟ್ಲ ಠಾಣೆ ಪೊಲೀಸರು ಆರೋಪಿತನನ್ನು ಬಂಧಿಸಿ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.





