ಕಾಲೇಜುಗಳಲ್ಲಿ ಹಿಜಾಬ್ ತೀರ್ಪು: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಪೀಠಕ್ಕೆ ವರ್ಗಾವಣೆ
ನವದೆಹಲಿ: ಕರ್ನಾಟಕದ ಪದವಿಪೂರ್ವ ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿರುವ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿಗಳನ್ನು ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ ಮುಖ್ಯ ನ್ಯಾಯಮೂರ್ತಿ ಪೀಠಕ್ಕೆ ವರ್ಗಾಯಿಸಿದೆ.
ನ್ಯಾಯಮೂರ್ತಿ ಹೇಮಂತ್ ಗುಪ್ತ ಅವರು ವಿದ್ಯಾರ್ಥಿನಿಯರ ಮೇಲ್ಮನವಿಗಳನ್ನು ತಿರಸ್ಕರಿಸಿದರು. ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರು ಹೈಕೋರ್ಟ್ ಆದೇಶವನ್ನು ರದ್ದುಪಡಿಸಿದರು.
10 ದಿನಗಳ ವಾದ–ಪ್ರತಿವಾದ ಆಲಿಸಿದ್ದ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತ ಹಾಗೂ ಸುಧಾಂಶು ಧುಲಿಯಾ ಅವರನ್ನು ಒಳಗೊಂಡ ಪೀಠವು ಸೆಪ್ಟೆಂಬರ್ 22ರಂದು ತೀರ್ಪನ್ನು ಕಾಯ್ದಿರಿಸಿತ್ತು. ಗುರುವಾರ ಬೆಳಿಗ್ಗೆ 10.30ಕ್ಕೆ ತೀರ್ಪನ್ನು ಪ್ರಕಟಿಸಿತು.
‘ಸರ್ಕಾರಿ ಕಾಲೇಜುಗಳ ತರಗತಿಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ನಿರ್ದೇಶಿಸಬೇಕು’ ಎಂದು ಕೋರಲಾಗಿದ್ದ ಎಲ್ಲಾ ವೈಯಕ್ತಿಕ ಹಾಗೂ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮಾರ್ಚ್ 15ರಂದು ಸಾರಾಸಗಟಾಗಿ ತಿರಸ್ಕರಿಸಿದ್ದ ಹೈಕೋರ್ಟ್‌ನ ತ್ರಿಸದಸ್ಯ ಪೀಠ, ‘ಈ ವಿಷಯವನ್ನು ದೇಶದಾದ್ಯಂತ ವಿವಾದದ ವಿಷಯವನ್ನಾಗಿ ಮಾಡಿರುವ ಹಿಂದೆ ಕಾಣದ ಕೈಗಳು ಅಡಗಿವೆ’ ಎಂಬ ಸಂಶಯ ವ್ಯಕ್ತಪಡಿಸಿತ್ತು.
‘ಹಿಜಾಬ್ ಇಸ್ಲಾಂನ ಅತ್ಯಾವಶ್ಯಕ ಧಾರ್ಮಿಕ ಆಚರಣೆ ಎಂಬುದನ್ನು ಸಾಬೀತುಪಡಿಸುವಲ್ಲಿ ಅರ್ಜಿದಾರರು ವಿಫಲವಾಗಿದ್ದಾರೆ. ಅಂತೆಯೇ ಇಸ್ಲಾಂ ಧರ್ಮದ ಅನುಸಾರ ಹಿಜಾಬ್ ಅತ್ಯಾವಶ್ಯಕ ಆಚರಣೆ ಎಂಬ ಉಲ್ಲೇಖಕ್ಕೆ ಕುರಾನಿನಲ್ಲಿ ಯಾವುದೇ ಅಧಿಕೃತ ಆಧಾರವಿಲ್ಲ’ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿತ್ತು.




