ವಿಟ್ಲ: ಮುಸ್ಲಿಂ ಸಮುದಾಯದ ಇಬ್ಬರು ಬಾಲಕಿಯರ ಮೇಲೆ ಹಲ್ಲೆ ಪ್ರಕರಣ: ಒಬ್ಬ ಆರೋಪಿ ವಿರುದ್ಧ ಸಾರ್ವಜನಿಕ ಶಾಂತಿಭಂಗ ಪ್ರಕರಣ ದಾಖಲು
ವಿಟ್ಲ: ಇಬ್ಬರು ಮುಸ್ಲಿಂ ಸಮುದಾಯಕ್ಕೆ ಸೇರಿದ ಬಾಲಕಿಯರ ಮೇಲೆ ತಪ್ಪು ಗ್ರಹಿಕೆಯಿಂದ ಹಿಗ್ಗಾಮುಗ್ಗ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ವಿಟ್ಲ ಪೊಲೀಸರು ಒಬ್ಬ ಆರೋಪಿಯ ಮೇಲೆ ಸಾರ್ವಜನಿಕ ಶಾಂತಿ ಭಂಗ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಿನ್ನೆ ರಾತ್ರಿಯೇ ಒಬ್ಬ ಆರೋಪಿಯನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಹಲ್ಲೆಗೊಳಗಾದ ಯುವತಿಯರು ವಿಟ್ಲ ಪೊಲೀಸರಿಗೆ ಯಾವುದೇ ದೂರು ನೀಡಿಲ್ಲ. ಈ ಬಗ್ಗೆ ಎರಡು ಕಡೆಯವರು ರಾಜಿ ಮಾತುಕತೆ ಮೂಲಕ ಇತ್ಯಾರ್ಥಗೊಳಿಸಿದ್ದರು. ಇದೀಗ ಪೊಲೀಸರು ಸಾರ್ವಜನಿಕವಾಗಿ ಹಲ್ಲೆ ನಡೆಸಿದ ವಿಚಾರದಲ್ಲಿ ಸಾರ್ವಜನಿಕ ಶಾಂತಿಭಂಗ ಪ್ರಕರಣ ದಾಖಲಿಸಿಕೊಂಡು ಆರೋಪಿ ಕರೈ ನಿವಾಸಿ ಮಹಮ್ಮದ್ ಆರೀಫ್ ಎಂಬಾತನ್ನು ಬಿಡುಗಡೆಗೊಳಿಸಿದ್ದಾರೆ.
ಘಟನೆ ವಿವರ: ಸಾಲೆತ್ತೂರು ನಿವಾಸಿ ಆಟೋ ಚಾಲಕನ ಪುತ್ರಿ ತನ್ನ ಸ್ನೇಹಿತೆ ಮತ್ತೊಬ್ಬಳು ಯುವತಿ ಜತೆ ಮನೆಯಲ್ಲಿ ಯಾರಲ್ಲಿಯೂ ಹೇಳದೇ ಮನೆಬಿಟ್ಡು ತೆರಳಿದ್ದರು.ಈ ಬಗ್ಗೆ ಎಲ್ಲ ಕಡೆ ಹುಡುಕಾಡಿದರೂ ಸಿಕ್ಕಿರಲಿಲ್ಲ. ಬಳಿಕ ಕೆಲ ಸ್ವಯಂ ಘೋಷಿತ ಸಮಾಜ ಸೇವಕರು ಅವರನ್ನು ಹುಡುಕಲು ಪ್ರಾರಂಭಿಸಿದ್ದಾರೆ. ವಿಟ್ಲಯಲ್ಲಿ ಹುಡುಕಾಡುತ್ತಿದ್ದಾಗ ಕುದ್ದುಪದವು ಮೂಲದ ಇಬ್ಬರು ಯುವತಿಯರು ಕಾಣಿಸಿದ್ದು, ಅವರಿಗೆ ಹಿಗ್ಗಾಮುಗ್ಗ ಥಳಿಸಿದ್ದು, ಬುರ್ಖಾ ತೆಗೆದಾಗ ಅವರು ಬೇರೆಯವರು ಎಂದು ತಿಳಿದಾಗ ಪೇಚಿಗೆ ಸಿಲುಕಿದ್ದಾರೆ. ಬಳಿಕ ಸಾರ್ವಜನಿಕರು ಹಲ್ಲೆ ನಡೆಸಿದವರನ್ನು ಪೊಲೀಸರಿಗೆ ಒಪ್ಪಿಸಿದ್ದರು.
ನಾಪತ್ತೆಯಾಗಿದ್ದ ಇಬ್ಬರು ಪುತ್ತೂರು ಬಸ್ ನಿಲ್ದಾಣದಲ್ಲಿ ಸಿಕ್ಕಿದ್ದು, ಅವರನ್ನು ವಿಟ್ಲ ಠಾಣೆಗೆ ಕರೆಯಿಸಿ, ಬುದ್ದಿವಾದ ಹೇಳಿ ಮನೆಯವರ ಜತೆ ಕಳುಹಿಸಿಕೊಟ್ಟಿದ್ದರು.
ಹಲ್ಲೆಗೊಳಗಾದ ಇಬ್ಬರು ಬಾಲಕಿಯರು ಆಸ್ಪತ್ರೆಗೆ ದಾಖಲಾಗಿದ್ದು, ವಿಟ್ಲ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದರು.
ರಾಜಿಮಾತುಕತೆ:
ಸ್ವಯಂ ಘೋಷಿತ ಸಮಾಜ ಸೇವಕರಿಂದ ಹಲ್ಲೆಗೊಳಗಾದ ಅಪ್ರಾಪ್ತ ಬಾಲಕಿ ಸಹಿತ ಇಬ್ಬರು ಬಾಲಕಿಯರು ಅವರ ಹೆತ್ತವರ ಜತೆ ಪೊಲೀಸರಿಗೆ ದೂರು ನೀಡುವ ಹಿನ್ನೆಲೆಯಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಲು ತೆರಳಿದ್ದರು. ಇತ್ತ ಪೊಲೀಸರು ಯುವತಿಯರನ್ನು ಸಂಪರ್ಕಿಸಿ ಹೇಳಿಕೆ ಪಡೆಯಲು ತೆರಳಿದಾಗ ಅತ್ತ ಇಬ್ಬರು ಬಾಲಕಿಯರು ಮತ್ತು ಅವರ ಕಡೆಯವರು ಆಸ್ಪತ್ರೆಯಿಂದ ತೆರಳಿದ್ದರು.





