ಆನ್‌ಲೈನ್ ಗೇಮ್ಸ್, ಆನ್‌ಲೈನ್ ಜೂಜಾಟವನ್ನು ನಿಷೇಧಿಸಿದ ತಮಿಳುನಾಡು ಸರ್ಕಾರ
ಚೆನ್ನೈ: ಆನ್‌ಲೈನ್ ಗೇಮ್ಸ್ ಮತ್ತು ಆನ್‌ಲೈನ್ ಜೂಜಾಟವನ್ನು ನಿಷೇಧಿಸಿ ತಮಿಳುನಾಡು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಈ ಕಾನೂನನ್ನು ನಿರ್ವಹಿಸಲು ಆನ್‌ಲೈನ್ ಗೇಮಿಂಗ್ ಪ್ರಾಧಿಕಾರವನ್ನು ರಚಿಸಲಾಗುವುದು ಎಂದು ಹೇಳಿದೆ.
ಈ ಕುರಿತು ಸರ್ಕಾರ ಅಕ್ಟೋಬರ್ 3ರಂದು ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ. ಅಕ್ಟೋಬರ್ 1ರಂದು ರಾಜ್ಯಪಾಲ ಆರ್.ಎನ್. ರವಿ ಅವರು ಸುಗ್ರೀವಾಜ್ಞೆಯನ್ನು ಹೊರಡಿಸಿದ್ದಾರೆ. ತಮಿಳುನಾಡಿನಲ್ಲಿ ಆನ್‌ಲೈನ್ ಜೂಜಾಟ ತಡೆ ಮತ್ತು ಆನ್‌ಲೈನ್ ಗೇಮಿಂಗ್ ನಿಯಂತ್ರಣ ಸುಗ್ರೀವಾಜ್ಞೆಯು ಅಧಿಸೂಚನೆ ಬಿಡುಗಡೆ ಮಾಡಿದ ದಿನದಿಂದಲೇ ಚಾಲ್ತಿಗೆ ಬರಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಆನ್‌ಲೈನ್ ಜೂಜಾಟ ಮತ್ತು ಗೇಮ್ಸ್‌ನಿಂದ ಸಾಕಷ್ಟು ಕುಟುಂಬಗಳ ಜೀವನ ಹಾಳಾಗಿದೆ. ಆತ್ಮಹತ್ಯೆ ಕೃತ್ಯಗಳಿಗೆ ಪ್ರೇರೇಪಿಸಿದೆ. ಸಾರ್ವಜನಿಕ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತಿದೆ. ಕಾನೂನು ನಿರ್ವಹಣೆಗೆ ತೊಡಕಾಗುತ್ತಿದೆ. ಹಾಗಾಗಿ ಈ ಸುಗ್ರೀವಾಜ್ಞೆಯನ್ನು ಹೊರಡಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.




