ಬಿಜೆಪಿ ಪಕ್ಷಕ್ಕೆ ರಾಜಿನಾಮೆ ನೀಡಿದ ಬಿಜೆಪಿ ಬೆಂಬಲಿತ ಅಮ್ಚಾಡಿ ಗ್ರಾಮ ಪಂಚಾಯತ್ ಸದಸ್ಯೆ.
ಅಮ್ಟಾಡಿ: ಕಳೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ಸದಸ್ಯೆಯೊಬ್ಬರು ತನ್ನ ವಾರ್ಡ್ ನ ಸಮಸ್ಯೆಗಳ ಪರಿಹಾರಕ್ಕಾಗಿ ಬಿಜೆಪಿ ಪಕ್ಷ ಸೇರ್ಪಡೆಗೊಂಡು , ಇದೀಗ ಅಭಿವೃದ್ಧಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಘಟನೆ ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದಿಂದ ವರದಿಯಾಗಿದೆ.
ಕಳೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅಮ್ಟಾಡಿ ಗ್ರಾಮದ ಲೋರೊಟ್ಟು ಪದವು ವಾರ್ಡ್ ನಿಂದ ಕಾಂಗ್ರೆಸ್ ಪಕ್ಷದ ಬೆಂಬಲಿತರಾಗಿ ಸ್ಪರ್ಧಿಸಿ ಸೌಮ್ಯ ಅವರು ಗೆಲುವು ಸಾಧಿಸಿದ್ದರು. ತನ್ನ ವಾರ್ಡ್ ನ ಅಭಿವೃದ್ಧಿ ಭರವಸೆ ನೀಡಿದ ಕಾರಣಕ್ಕಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು 10 ತಿಂಗಳು ಕಳೆದರೂ ಭರವಸೆ ನೀಡಿದ ಒಂದೇ ಒಂದು ಅಭಿವೃದ್ಧಿ ಕಾಮಗಾರಿ ನಡೆಯದ ಹಿನ್ನೆಲೆಯಲ್ಲಿ ಬೇಸತ್ತು ಗ್ರಾಮ ಪಂಚಾಯತ್ ಸದಸ್ಯೆ ಸೌಮ್ಯ ಅವರು ಬಿಜೆಪಿ ಪಕ್ಷಕ್ಕೆ ಗುರುವಾರ ರಾಜಿನಾಮೆ ನೀಡಿದರು.
ತನ್ನ ವಾರ್ಡ್ ನಲ್ಲಿ ತಾನು ಜನರಿಗೆ ಭರವಸೆ ನೀಡಿದ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಕಿರಿಕಿರಿ ಹಾಗೂ ಮಾನಸಿಕ ತೊಂದರೆಯಿಂದ ತಾನು ಬಿಜೆಪಿ ಪಕ್ಷಕ್ಕೆ ರಾಜಿನಾಮೆ ನೀಡುತ್ತಿದ್ದೇನೆ ಎಂದು ಬಂಟ್ವಾಳ ಬಿಜೆಪಿ ಮಂಡಲ ಅಧ್ಯಕ್ಷ ದೇಜಪ್ಪ ಪೂಜಾರಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದಿರೆ ಅವರಿಗೆ ನೀಡಿದ ರಾಜಿನಾಮೆ ಪತ್ರದಲ್ಲಿ ಅಮ್ಟಾಡಿ ಗ್ರಾಮ ಪಂಚಾಯತ್ ಸದಸ್ಯೆ ಸೌಮ್ಯ ತಿಳಿಸಿದ್ದಾರೆ.




