ಮದ್ರಸಕ್ಕೆ ನುಗ್ಗಿ ಪೂಜೆ ಸಲ್ಲಿಸಿದ ಪ್ರಕರಣ: 4 ಮಂದಿ ಸಂಘಪರಿವಾರದ ಕಾರ್ಯಕರ್ತರ ಬಂಧನ
ಬೀದರ: ವಿಜಯ ದಶಮಿ ಹಿನ್ನೆಲೆಯಲ್ಲಿ ಕೇಂದ್ರ ಪುರಾತತ್ವ ಇಲಾಖೆ ಅಧೀನದಲ್ಲಿರುವ ನಗರದ ಓಲ್ಡ್ ಸಿಟಿಯ ಮಹಮದ್ ಗವಾನ್ ಮದರಸಾ ಆವರಣಕ್ಕೆ ಕೆಲ ಕಿಡಿಗೇಡಿಗಳು ಪ್ರವೇಶಿಸಿ ಪೂಜೆ ಸಲ್ಲಿಸಿದ ಘಟನೆ ನಡೆದಿದ್ದು, ಈ ದೃಶ್ಯ ವಿಡಿಯೋ ವೈರಲ್ ದಿಂದಾಗಿ ಸೌಹಾರ್ದತೆ ನೆಲದಲ್ಲಿ ಈಗ ತ್ವೇಷಮಯ ವಾತಾವರಣ ಸೃಷ್ಟಿಯಾಗಿದೆ. ಘಟನೆಗೆ ಸಂಬಂದಿಸಿದಂತೆ ನಾಲ್ಕು ಮಂದಿ ಸಂಘಪರಿವಾರದ ಕಾರ್ಯಕರ್ತರನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಒಳಕೋಟೆ ಭವಾನಿ ದೇವಿ ಮೂರ್ತಿಯ ಮೆರವಣಿಗೆ ವೇಳೆ ಕೆಲವರು ಓಲ್ಡ್‌ಸಿಟಿ ಗವಾನ್ ಸ್ಮಾರಕದಲ್ಲಿ ಅಕ್ರಮವಾಗಿ ಪ್ರವೇಶಿಸಿ ಪೂಜೆ ಸಲ್ಲಿಸಿದ್ದಾರೆ. ಈ ದೃಶ್ಯವನ್ನು ಸೆರೆ ಹಿಡಿದು ವಿಡಿಯೋ ವೈರಲ್ ಮಾಡಲಾಗಿತ್ತು.
ಇದು ಒಂದು ಕೋಮಿನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಂತಾಗಿದೆ ಎಂದು ಆರೋಪಿಸಿ ಉದ್ಯಮಿ ಸೈಯ್ಯದ್ ಮುಬಾಶಿರ್ ಅಲಿ ಎಂಬುವರು 9 ಜನ ಸೇರಿ 60 ಜನ ಅನಾಮಧೇಯರ ವಿರುದ್ಧ ಮಾರ್ಕೆಟ್ ಠಾಣೆಯಲ್ಲಿ ದೂರು ನೀಡಿದ್ದರು.
ಅಷ್ಟೇ ಅಲ್ಲ ಧಾರ್ಮಿಕ ಸಾಮರಸ್ಯ ಕದಡಲು ಯತ್ನಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮುಸ್ಲಿಮ್ ಸಂಘಟನೆಗಳು ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದರು.
ಗುರುವಾರ ಮಂಜಾನೆ 1.30ರ ಸುಮಾರಿಗೆ ಕಿಡಿಗೇಡಿಗಳು ಮಹಮೂದ್ ಗವಾನ್ ಮದರಸಾ ಹಾಗೂ ಮಸೀದಿ ಬೀಗ ಒಡೆದು ಕಾನೂನು ಬಾಹಿರವಾಗಿ ಸ್ಮಾರಕ ಪ್ರದೇಶದೊಳಗೆ ಪ್ರವೇಶಿಸಿ ಶಾಂತಿ, ಸೌಹಾರ್ದತೆ ಕದಡುವ ಕೆಲಸ ಮಾಡಿದ್ದಾರೆ. ಗೋಡೆಗಳ ಮೇಲೆ ಅನುಪಯುಕ್ತ ವಸ್ತುಗಳನ್ನು ಎಸೆದು ಹಾನಿ ಮಾಡಲು ಪ್ರಯತ್ನಿಸಿದ್ದಾರಲ್ಲದೇ ದೇಶ ವಿರೊಧಿ ಘೋಷಣೆಗಳನ್ನು ಕೂಗಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ನರೇಶ ಗೌಳಿ, ಪ್ರಕಾಶ, ವಿನು, ಮನ್ನಾ, ಸಾಗರ ಬಂಟಿ, ಜಗದೀಶ ಗೌಳಿ, ಅರುಣ ಗೌಳಿ, ಗೋರಖ ಗೌಳಿ ಸೇರಿ 60 ಜನರು ಭಾಗಿಯಾಗಿದ್ದು, ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.




