ಕುಂಜತ್ತಬೈಲ್ ಅಲ್- ರಿಫಾಯಿಯ್ಯ ನೂರುಲ್ ಇಸ್ಲಾಮ್ ಮದರಸದ ನೂತನ ಕೊಠಡಿಗಳ ಉದ್ಘಾಟನಾ ಸಮಾರಂಭ
ಮಂಗಳೂರು: ಜಮಾತುಲ್ ಮುಸ್ಲಿಮೀನ್ ಕಮಿಟಿ (ರಿ) ಸಿದ್ದೀಖ್ ಜುಮಾ ಮಸ್ಜಿದ್ ಮರಕಡ, ಕುಂಜತ್ತಬೈಲ್ ಇದರ ಅಧೀನದ ಅಲ್- ರಿಫಾಯಿಯ್ಯ ನೂರುಲ್ ಇಸ್ಲಾಮ್ ಮದರಸದ ನೂತನ ಕೊಠಡಿಗಳ ಉದ್ಘಾಟನಾ ಸಮಾರಂಭ ಹಾಗೂ ಮೀಲಾದ್ ಸ೦ಭ್ರಮ-೨೦೨೨ ಕಾರ್ಯಕ್ರಮವು ಸಿದ್ದೀಖ್ ಜುಮಾ ಮಸ್ಲಿದ್ ವಠಾರದಲ್ಲಿ ಜಮಾಅತ್ ಅಧ್ಯಕ್ಷ ಅಶ್ರಫ್ ಮರಕಡ ರವರ ಅಧ್ಯಕ್ಷತೆಯಲ್ಲಿ ಜರುಗಿತು. ಮಖ್ಯ ಅತಿಥಿಗಳಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಭಾಗವಹಿಸಿ ನೂತನ ಕಟ್ಟಡಗಳ ಉದ್ಘಾಟನೆಯನ್ನು ನೆರವೇರಿಸಿ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.


ಇಂದು ಮದ್ರಸಾಗಳ ಬಗ್ಗೆ ಸಮಾಜದಲ್ಲಿ ಕೆಲವೊಂದು ತಪ್ಪು ಸಂದೇಶಗಳು ಹರಿದಾಡುತ್ತಿದ್ದು, ಮದ್ರಸಾಗಳು ತೆರೆದ ಪುಸ್ತಕವಿದ್ದಂತೆ, ಈ ಬಗ್ಗೆ ಯಾರೂ ಕೂಡಾ ಗೊಂದಲಕ್ಕೊಳಗಾಗದೆ ಮದ್ರಸಾಗಳ ಬಗ್ಗೆ ಅಲ್ಲಿನ ಪಠ್ಯಕ್ರಮಗಳ ಬಗ್ಗೆ ಹಾಗೂ ಬೋಧನೆಗಳ ಬಗ್ಗೆ ಖುದ್ದಾಗಿ ಭೇಟಿಯಿತ್ತು ಮುಕ್ತವಾಗಿ ಅಧ್ಯಯನ ಮಾಡಬಹುದು. ಎಲ್ಲಾ ಧರ್ಮಗಳಂತೆ ಇಸ್ಲಾಂ ಧರ್ಮವೂ ಕೂಡಾ ಶಾಂತಿ, ಸಹನೆ, ಮಾನವೀಯತೆ ಸಂದೇಶಗಳನ್ನು ನೀಡುತ್ತಿದೆ. ಪ್ರವಾದಿ ಪೈಗಂಬರರ ಸಾಮರಸ್ಯದ ಸಂದೇಶಗಳನ್ನು ಅನುಸರಿಸುವ ಮೂಲಕ ಸೌಹಾರ್ದತೆಯ ನಾಡನ್ನು ಕಟ್ಟಲು ನಾವೆಲ್ಲ ಮುಂದಾಗಬೇಕು ಎಂದು ಇನಾಯತ್ ಅಲಿ ಹೇಳಿದರು.
ಮಾಜಿ ಮೇಯರ್ ಎಮ್. ಹರಿನಾಥ್, ಮಾಜಿ ಉಪಮೇಯರ್ ಕೆ. ಮಹಮ್ಮದ್, ಸ್ಥಳೀಯ ಕಾರ್ಪೋರೇಟರ್ ಶರತ್ ಕುಮಾರ್, ಗಲ್ಫ್ ನೌಕರರ ಸಂಘದ ಅಧ್ಯಕ್ಷ ನಝೀರ್ ಹುಸೈನ್, ಜಮಾಅತ್ ಪಧಾದಿಕಾರಿಗಳಾದ ಇಬ್ರಾಹಿಂ ಅಬ್ಬಾಸ್, ಇಬ್ರಾಹಿಂ ಅತ್ರಬೈಲ್, ಕೆ.ಎಸ್ ಮೊಹಮ್ಮದ್, ನೂರ್ ಮೊಹಮ್ಮದ್ ಇನ್ನಿತರರು ಉಪಸ್ಥಿತರಿದ್ದರು.
ಖತೀಬರಾದ ಅನ್ಸಾರ್ ಸಖಾಫಿ ಮುಕ್ವೆ ದುವಾ ಆಶೀರ್ವಚನಗೈದರು, ಕಾರ್ಯದರ್ಶಿ ಹುಸೈನ್ ರಿಯಾಝ್ ಸ್ವಾಗತಿಸಿದರು, ರೆಹಮಾನ್ ಖಾನ್ ಕುಂಜತ್ತಬೈಲ್ ಕಾರ್ಯಕ್ರಮ ನಿರೂಪಿಸಿದರು.




