ಸಾಕು ಇಲಿ ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ದೂರು ನೀಡಿದ ಮಾಲೀಕ: ಕಳ್ಳತನ ಪ್ರಕರಣ ದಾಖಲಿಸಿದ ಪೊಲೀಸರು
ಸಾಕುನಾಯಿ, ಸಾಕುಬೆಕ್ಕುಗಳು ಕಳ್ಳತನವಾಗಿದೆ ಎಂದು ದೂರು ದಾಖಲಿಸುವುದನ್ನು ನೀವು ಕೇಳಿರಬಹುದು. ಆದರೆ ಇಲ್ಲೊಬ್ಬರು ಸಾಕು ಇಲಿ ಕಳ್ಳತನವಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್‌ಐಆರ್ ಕೂಡಾ ದಾಖಲಾಗಿದೆ!
ರಾಜಸ್ಥಾನದ ಬುಡಕಟ್ಟು ಪ್ರಾಬಲ್ಯದ ಬನ್ಸ್ವಾರಾ ಜಿಲ್ಲೆಯಲ್ಲಿ ಬರ್ಖಿಯಾ ನಿವಾಸಿ 62 ವರ್ಷದ ಮಂಗು ಎಂಬವರು ಈ ರೀತಿ ವಿಶಿಷ್ಟ ಕಳ್ಳತನ ಪ್ರಕರಣ ದಾಖಲಿಸಿದವರು. ಇಲ್ಲಿನ ಸಜ್ಜನ್ ಘರ್ ಪೊಲೀಸ್ ಠಾಣೆ ವ್ಯಾಪ್ತಿಯ ಪಡ್ಲಾ ವಡ್ಖಿಯಾ ಗ್ರಾಮದಲ್ಲಿ ಸಾಕು ಇಲಿಯನ್ನ ಕಳ್ಳತನ ಮಾಡಲಾಗಿದೆ ಎಂದ. ಈ ಬಗ್ಗೆ ಇಲಿಯ ಮಾಲಕರು ದೂರು ನೀಡಿದ್ದು, ಅದನ್ನು ದಾಖಲಿಸಿಕೊಳ್ಳುವುದು ಮತ್ತು ತನಿಖೆ ನಡೆಸುವುದು ನಮ್ಮ ಕರ್ತವ್ಯ ಎಂದು ಸಜ್ಜನ್ಘರ್ ಪೊಲೀಸ್ ಠಾಣಾಧಿಕಾರಿ ಧನಪತ್ ಸಿಂಗ್ ಹೇಳಿರುವುದಾಗಿ ವರದಿಯಾಗಿದೆ.ಮುಳ್ಳಿನ ಇಲಿಯನ್ನು ಮಂಗು ಅವರು ತಮ್ಮ ಮನೆಯಲ್ಲಿ ಸಾಕಿದ್ದರು. ಅದು ಸುಮಾರು 700 ಗ್ರಾಂ ತೂಕವನ್ನು ಹೊಂದಿತ್ತು. ಸೆಪ್ಟೆಂಬರ್ 28 ರಂದು ಮುಂಜಾನೆ 2 ಗಂಟೆ ಸುಮಾರಿಗೆ ಅದನ್ನು ಕಳವು ಮಾಡಲಾಗಿದೆ ಎಂದು ದೂರು ಸಲ್ಲಿಸಿದ್ದಾರೆ. ಅಲ್ಲದೆ, ತನ್ನ ಸಹೋದರನ ಮಗ ಕಳ್ಳತನ ಮಾಡಿದ್ದಾನೆಂದು ಆರೋಪ ಹೊರಿಸಿದ್ದಾರೆ. ಮೋಹಿತ್, ಅರವಿಂದ್ ಮತ್ತು ಸಹೋದರನ ಮಗ ಸುರೇಶ್ ಇಲಿಯನ್ನು ಕಳವು ಮಾಡಿರುವುದಾಗಿ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.ದೂರಿನ ಮೇರೆಗೆ ಆರೋಪಿಗಳ ವಿರುದ್ದ ಐಪಿಸಿ ಸೆಕ್ಷನ್ 457 ಮತ್ತು 380ರ ಅಡಿಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ. ಅಲ್ಲದೆ ಆರೋಪಿತ ಯುವಕರನ್ನು ವಿಚಾರಣೆಗೆ ಕರೆಸಲಾಗಿದೆ. ಶೀಘ್ರ ಸಂತ್ರಸ್ತನಿಗೆ ನ್ಯಾಯ ಒದಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.