ಇರಾಕ್ ಮೇಲೆ ಡ್ರೋನ್ ದಾಳಿ: ಗರ್ಭಿಣಿ ಮಹಿಳೆ ಸೇರಿದಂತೆ 13 ಮಂದಿ ನಾಗರಿಕರು ಮೃತ್ಯು
ಬಾಗ್ದಾದ್: ಉತ್ತರ ಇರಾಕ್‌ನ ಕುರ್ದಿಸ್ತಾನ್ ಪ್ರದೇಶದಲ್ಲಿ ಇರಾನ್ ಪಡೆಗಳು ನಡೆಸಿದ ಡ್ರೋನ್ ದಾಳಿಯಲ್ಲಿ ಗರ್ಭಿಣಿ ಮಹಿಳೆ ಸೇರಿದಂತೆ 13 ಮಂದಿ ನಾಗರಿಕರು ಮೃತಪಟ್ಟಿದ್ದಾರೆ.
ಘಟನೆಯಲ್ಲಿ 58 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಖಂಡಾಂತರ ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಬಳಸಿ ನಾಲ್ಕು ಹಂತದಲ್ಲಿ ಬಾಂಬ್ ದಾಳಿ ನಡೆಸಿದೆ ಎಂದು ಪ್ರಾದೇಶಿಕ ಕುರ್ದಿಶ್ ಭಯೋತ್ಪಾದನಾ ನಿಗ್ರಹ ಸೇವೆ (ಸಿಟಿಎಸ್) ತಿಳಿಸಿದೆ.
ಕುರ್ದಿಶ್ ವಿರೋಧ ಪಕ್ಷಗಳ ಪ್ರಧಾನ ಕಚೇರಿಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ.
‘ಇರಾಕ್‌ನ ಕುರ್ದಿಸ್ತಾನ್ ಪ್ರದೇಶದಲ್ಲಿ ನಾಲ್ಕು ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಇರಾನ್ ಡ್ರೋನ್ ದಾಳಿ ನಡೆಸಿದೆ. ಸಾವು –ನೋವಿಗೆ ಕಾರಣವಾದ ದಾಳಿಯನ್ನು ಬಲವಾಗಿ ಖಂಡಿಸುತ್ತೇವೆ’ ಎಂದು ಇರಾಕ್‌ನ ವಿದೇಶಾಂಗ ಸಚಿವಾಲಯ ತಿಳಿಸಿದೆ.