ಅಡ್ಯನಡ್ಕ ಜನತಾ ಪದವಿಪೂರ್ವ ಕಾಲೇಜು:
ಸಾಹಿತ್ಯ ಸಂಘದ ವತಿಯಿಂದ ‘ಅಂತರ್ ತರಗತಿ ಪ್ರತಿಭಾ ದಿನ’
ಅಡ್ಯನಡ್ಕ: ಜನತಾ ಪದವಿಪೂರ್ವ ಕಾಲೇಜು ಅಡ್ಯನಡ್ಕ ಇದರ ಸಾಹಿತ್ಯ ಸಂಘದ ಆಶ್ರಯದಲ್ಲಿ ವಿದ್ಯಾರ್ಥಿಗಳ ‘ಅಂತರ್ ತರಗತಿ ಪ್ರತಿಭಾ ದಿನ’ ಮತ್ತು 2022 -23 ಸಾಲಿನ ಸಾಹಿತ್ಯ ಸಂಘದ ಉದ್ಘಾಟನಾ ಕಾರ್ಯಕ್ರಮ ಸೆಪ್ಟೆಂಬರ್ 24ರಂದು ವಿದ್ಯಾಸಂಸ್ಥೆಯ ವಾರಣಾಶಿ ಕೃಷ್ಣ ಸಭಾಭವನದಲ್ಲಿ ನಡೆಯಿತು.
ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಡಿ. ಶ್ರೀನಿವಾಸ್, ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಟಿ. ಆರ್. ನಾಯ್ಕ್, ಹಿರಿಯ ಶಿಕ್ಷಕರಾದ ಶ್ರೀ ಎಸ್. ರಾಜಗೋಪಾಲ ಜೋಶಿ, ಜನತಾ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ಶಿಕ್ಷಕಿ ಶ್ರೀಮತಿ ಹರಿಣಾಕ್ಷಿ, ಜನತಾ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರಾದ ಶ್ರೀ ಪ್ರಶಾಂತ ಮುಳಿಯ ಇವರ ಸಮಕ್ಷಮದಲ್ಲಿ ಸಾಹಿತ್ಯ ಸಂಘದ ವಾರ್ಷಿಕ ಕಾರ್ಯಚಟುವಟಿಕೆಗಳ ಉದ್ಘಾಟನೆ ನಡೆಯಿತು. ಸಾಹಿತ್ಯ ಸಂಘದ ಸಂಯೋಜಕರಾದ ಶ್ರೀಮತಿ ಜಯಶ್ರೀ ಕೆ.ಆರ್., ಅಧ್ಯಕ್ಷರಾದ ಕು. ಶರಣ್ಯ ದ್ವಿತೀಯ ವಿಜ್ಞಾನ ವಿಭಾಗ, ಉಪಾಧ್ಯಕ್ಷರಾದ ಕು. ಧನರಾಜ್ ದ್ವಿತೀಯ ವಾಣಿಜ್ಯ ವಿಭಾಗ, ಜತೆ ಕಾರ್ಯದರ್ಶಿಯಾದ ಕು. ಅಫೀಜಾ ದ್ವಿತೀಯ ವಿಜ್ಞಾನ ವಿಭಾಗ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾಹಿತ್ಯ ಸಂಘದ ಸಂಯೋಜಕರಾದ ಕನ್ನಡ ಉಪನ್ಯಾಸಕ ಶ್ರೀ ಶೀನಪ್ಪ ನಾಯ್ಕ್ ಕೆ. ಅವರು ಕಾರ್ಯಕ್ರಮ ನಿರೂಪಿಸಿ, ಸಾಹಿತ್ಯ ಸಂಘದ ಮತ್ತೋರ್ವ ಸಂಯೋಜಕರಾದ ಹಿಂದಿ ಉಪನ್ಯಾಸಕರಾದ ಶ್ರೀ ಸೋಮಶೇಖರ್ ಎಚ್. ವಂದನಾರ್ಪಣೆಗೈದರು.
ಸಭಾ ಕಾರ್ಯಕ್ರಮದ ಬಳಿಕ ‘ಅಂತರ್ ತರಗತಿ ಪ್ರತಿಭಾ ದಿನ’ದ ಅಂಗವಾಗಿ ವಿದ್ಯಾರ್ಥಿಗಳು ಆಕರ್ಷಕವಾದ ವೈವಿಧ್ಯಮಯ ನೃತ್ಯಗಳು, ಸಮೂಹಗಾನ, ಭರತನಾಟ್ಯ, ಸಂಗೀತ, ಹಾಡುಗಾರಿಕೆ ಮುಂತಾದ ಪ್ರತಿಭಾ ಪ್ರದರ್ಶನ ನಡೆಸಿಕೊಟ್ಟರು. ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ತಂಡ ಪ್ರಥಮ ಸ್ಥಾನದ ಸಮಗ್ರ ಪ್ರಶಸ್ತಿ ಪಡೆಯಿತು. ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ತಂಡ ಪಡೆಯಿತು. ಉತ್ತಮ ಕಾರ್ಯಕ್ರಮ ನಿರೂಪಣೆಗಾಗಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಕು. ಮೋಕ್ಷಾ ಅವರಿಗೆ ‘ಆತ್ಯುತ್ತಮ ಕಾರ್ಯಕ್ರಮ ನಿರೂಪಕಿ’ ಪುರಸ್ಕಾರ ನೀಡಲಾಯಿತು.
ಜನತಾ ಪ್ರೌಢಶಾಲೆಯ ಹಿರಿಯ ಶಿಕ್ಷಕರಾದ ಶ್ರೀ ಎಸ್. ರಾಜಗೋಪಾಲ ಜೋಶಿ, ಜನತಾ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ಶಿಕ್ಷಕಿ ಶ್ರೀಮತಿ ಹರಿಣಾಕ್ಷಿ, ಜನತಾ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರಾದ ಶ್ರೀ ಪ್ರಶಾಂತ ಮುಳಿಯ ಅವರು ತೀರ್ಪುಗಾರರಾಗಿ ಸಹಕರಿಸಿದರು.



