ಹೋಟೆಲ್ ಮುಂಭಾಗ ನಿಂತಿದ್ದ ಐದು ಕಾರುಗಳಿಗೆ ಢಿಕ್ಕಿ ಹೊಡೆದ ಕ್ಯಾಂಟರ್: ಇಬ್ಬರು ಸ್ಥಳದಲ್ಲೇ ಸಾವು, ಗರ್ಭಿಣಿ ಗಂಭೀರ
ಚಿಕ್ಕಬಳ್ಳಾಪುರ: ನಗರದ ರಾಷ್ಟ್ರೀಯ ಹೆದ್ದಾರಿ 44ರ ರಾಮದೇವರಗುಡಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.
ಬೆಂಗಳೂರು ಕಡೆಯಿಂದ ಬರುತ್ತಿದ್ದ ಕ್ಯಾಂಟರ್ ಎದುರಿಗೆ ಅಡ್ಡ ಬಂದ ಏಕೋ ಸ್ಪೋರ್ಟ್ಸ್ ಕಾರನ್ನು ತಪ್ಪಿಸಲು ಹೋಗಿ ಹೈವೇಯ ಮತ್ತೊಂದು ಬದಿಗೆ ನುಗ್ಗಿದೆ.
ಮೊದಲು ಬೈಕ್ ಹಾಗೂ ತದನಂತರ ಪ್ರಣವ್ ಹೋಟೆಲ್ ಮುಂಭಾಗ ನಿಂತಿದ್ದ ಐದು ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬೈಕ್ ಸವಾರ ಪಿ ಚೊಕ್ಕನಹಳ್ಳಿ ಗ್ರಾಮದ ಪಿ.ಜನಾರ್ಧನ (20) ಮತ್ತು ಪ್ರಣವ್ ಹೋಟೆಲ್ ಸೆಕ್ಯೂರಿಟಿ ಗಾರ್ಡ್ ನಾರಾಯಣಸ್ವಾಮಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಹೋಟೆಲ್‍ಗೆ ತಿಂಡಿಗೆಂದು ಬಂದು ಕಾರಿನಿಂದ ಕೆಳಗೆ ಇಳಿದಿದ್ದ ಕಾಡಿಗುಡಿ ನಿವಾಸಿಗಳಾದ ಸಾಫ್ಟ್‌ವೇರ್ ಇಂಜಿನಿಯರ್ ಹರ್ಷ ದೇಶಪಾಂಡೆ ಅವರ ಪತ್ನಿ ಮಾನಸ ಹಾಗೂ ಅವರ ತಂದೆ ನರಸಿಂಹ ಮೇಲೆ ಕ್ಯಾಂಟರ್ ಹರಿದು ಗಂಭೀರ ಗಾಯಗೊಂಡಿದ್ದಾರೆ.
ಮಾನಸ ಗರ್ಭಿಣಿಯಾಗಿದ್ದು ಕಾಲಿನ ಮೇಲೆ ಕ್ಯಾಂಟರ್ ಹರಿದ ಪರಿಣಾಮ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳಿಬ್ಬರನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.




