ಮಲ್ಪೆ: ಮಳೆ- ಗಾಳಿಯಿಂದಾಗಿ ಸ್ಥಗಿತ ಗೊಂಡಿದ್ದ ಮೀನುಗಾರಿಕೆ: ಮತ್ತೆ ಸಮುದ್ರಕ್ಕಿಳಿದ ಯಾಂತ್ರಿಕ ಬೋಟುಗಳು
ಮಲ್ಪೆ : ಮಳೆ- ಗಾಳಿಯಿಂದಾಗಿಸಮುದ್ರ ಪ್ರಕ್ಷುಬ್ಧ ಗೊಂಡು 7-8 ದಿನಗಳಿಂದ ಸ್ಥಗಿತ ಗೊಂಡಿದ್ದ ಮೀನುಗಾರಿಕೆ ಮತ್ತೆ ಆರಂಭಗೊಂಡಿದೆ. ಸಮುದ್ರ ನಿಧಾನವಾಗಿ ಸಹಜ ಸ್ಥಿತಿಗೆ ಬರುತ್ತಿದ್ದು, ಯಾಂತ್ರಿಕ ಬೋಟುಗಳು ಕಡಲಿಗಿಳಿಯಲಾರಂಭಿಸಿವೆ.
ಬುಧವಾರ ಮಲ್ಪೆ ಬಂದರಿನಿಂದ ಸುಮಾರು ಶೇ. 40ರಷ್ಟು ಆಳಸಮುದ್ರ ಬೋಟುಗಳು ಕಡಲಿಗಿಳಿದಿವೆ. ಬಹುತೇಕ ಪಸೀìನ್ ಬೋಟುಗಳು ಬೆಳಗ್ಗೆಯೇ ಮೀನುಗಾರಿಕೆಗೆ ತೆರಳಿದ್ದವು. ಇನ್ನು ಕೆಲವು ಬೋಟುಗಳು ಕಡಲಿಗಿಳಿಯಲು ಸಿದ್ಧತೆ ನಡೆಸುತ್ತಿವೆ.
ಮೀನುಗಾರಿಕೆ ಋತು ಆರಂಭಗೊಂಡ ಒಂದು ತಿಂಗಳು ಕಳೆದು ಕೊಂಚ ಆದಾಯ ಗಳಿಸುವಷ್ಟರಲ್ಲೇ ಪ್ರತಿಕೂಲ ಹವಾಮಾನ ಸಂಭವಿಸಿದ್ದು ಮೀನು ಗಾರಿಕೆಯನ್ನು ನಡೆಸದಂತಾಗಿತ್ತು. 8 ದಿನಗಳಲ್ಲಿ ನಿತ್ಯ ಕೋಟ್ಯಂತರ ರೂಪಾಯಿ ವ್ಯವಹಾರಕ್ಕೆ ಹೊಡೆತ ಉಂಟಾಗಿತ್ತು.
ಇದೀಗ ಮೀನುಗಾರಿಕೆಗೆ ಪೂರಕ ವಾತಾವರಣ ನಿರ್ಮಾಣವಾಗಿದ್ದು, ಮೀನುಗಾರರು ಕಡಲಿಗಿಳಿಯಲು ಸಜ್ಜಾಗಿದ್ದಾರೆ. ಗುರುವಾರ ದಿಂದ ಉಳಿದ ಬೋಟ್‌ಗಳು ತೆರಳುವ ಸಾಧ್ಯತೆ ಇದೆ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಕೆ. ಸುವರ್ಣ ತಿಳಿಸಿದ್ದಾರೆ




