ಕುಳಾಲು: ಸರಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಕೆಲವು ವ್ಯಕ್ತಿಗಳಿಂದ ವಿರೋಧ: ಅಭಿವೃದ್ಧಿಯಲ್ಲಿ ಯಾವುದೇ ರಾಜಕೀಯವಿಲ್ಲ: ಸುಭಾಶ್ಚಂದ್ರ ಶೆಟ್ಟಿ ಕುಳಾಲು
ವಿಟ್ಲ: ಅಭಿವೃದ್ಧಿಯಲ್ಲಿ ಯಾವುದೇ ರಾಜಕೀಯವಿಲ್ಲ. ಸ್ಥಳೀಯ ಶಾಸಕರೂ ಕೆಲಸ ನಿಲ್ಲಿಸಲು ಎಲ್ಲೂ ಸೂಚಿಸಿಲ್ಲ. ಪಕ್ಷದ ಕಾರ್ಯಕರ್ತರು ಇದನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು
ಕೊಳ್ನಾಡು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಹೇಳಿದರು.
ಕುಳಾಲು ವಾರಾಹಿ ಸಭಾಭವನದಲ್ಲಿ ಕುಳಾಲು ಎಂಬಲ್ಲಿ ಆರೋಗ್ಯ ಕೇಂದ್ರ ನಿರ್ಮಾಣ ವಿಚಾರವಾಗಿ ಸಂಜೆ ಜನಜಾಗೃತಿ ಸಭೆಯಲ್ಲಿ ಅವರು ಮಾಧ್ಯಮದವರಿಗೆ ಮಾಹಿತಿ ನೀಡಿದರು.
ಕುಳಾಲಿನಲ್ಲಿ ಸರ್ಕಾರಿ ಆಸ್ಪತ್ರೆಯಾಗಬೇಕೆಂಬ ಬೇಡಿಕೆಯಿದ್ದು, ದಶಕದ ಹಿಂದೆ ಇದಕ್ಕೆ ಜಾಗ ಗುರುತಿಸಿ ಪಹಣಿ ಮಾಡುವ ಕಾರ್ಯವಾಗಿದೆ. ಈ ಜಾಗದಲ್ಲಿ ಆರೋಗ್ಯ ಹಾಗೂ ಕ್ಷೇಮ ಕೇಂದ್ರ ನಿರ್ಮಾಣಕ್ಕೆ ಮೇ.22 ರಂದು ಜಿಲ್ಲಾ ಮಟ್ಟದಲ್ಲಿ ಕಾಮಗಾರಿಗಳಿಗೆ ಶಿಲಾನ್ಯಾಸ ನಡೆಸಲಾಗಿತ್ತು. ಇದೀಗ ಮಂಜೂರಾದ ಪ್ರದೇಶ ಸ್ಥಳಾಂತರ ಮಾಡಬೇಕೆಂಬ ಕೂಗು ಪ್ರಾರಂಭವಾಗಿ, ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ತಡೆಯುಂಟಾಗಿದೆ. ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಅಗತ್ಯ ಅನುದಾನ ಇಲ್ಲದ ಕಾರಣ 2024ರ ಜು.8ರಂದು ವಿಧಾನ ಪರಿಷತ್ತಿನ ಸದಸ್ಯ ಮಂಜುನಾಥ ಭಂಡಾರಿ ಆರೋಗ್ಯ ಇಲಾಖೆಗೆ ಪತ್ರ ಬರೆದು ಅಗತ್ಯ ಅನುದಾನ ನೀಡುವಂತೆ ಆಗ್ರಹಿಸಿದ್ದರು. 15ನೇ ಹಣಕಾಸು ಯೋಜನೆಯಲ್ಲಿ ಆರೋಗ್ಯ ಕೇಂದ್ರ ಕಟ್ಟಡಕ್ಕೆ ಅನುದಾನ ಇಡಲಾಗಿದೆ. ಕುಳಾಲಿನ ಅಭಿವೃದ್ಧಿಗೆ ಬೇರೆ ಪಕ್ಷದವರು ಅನುದಾನ ತರಿಸುವ ಕಾರ್ಯ ಮಾಡಿಲ್ಲ. ಆರೋಗ್ಯ ಕೇಂದ್ರದ ಜಾಗದ ಪಕ್ಕ ಇರುವ 9 ಎಕ್ರೆಯಲ್ಲಿ ದೊಡ್ಡ ಕ್ರೀಡಾಂಗಣ ಮಾಡುವ ಕಾರ್ಯ ನಡೆಸಲಿ ಎಂದು ಅವರು ಹೇಳಿದರು.
ಆರೋಗ್ಯ ಇಲಾಖೆಗೆ ಇಟ್ಟ ಸರ್ಕಾರಿ ಜಾಗವನ್ನು ಆಟಕ್ಕೆ ಬೇಕೆಂದು ಹೇಳುವುದು ಸಮಂಜಸವಲ್ಲ. ಇಂತಹ ಬೇಡಿಕೆಗೆ ಕುಳಾಲಿನ ಜನ ಒಪ್ಪುವ ವಿಚಾರವಲ್ಲ. ಜನರ ಕಿರುಕುಳದಿಂದ ರದ್ದಾದರೆ, ಮತ್ತೆ ಆರೋಗ್ಯ ಕೇಂದ್ರಕ್ಕೆ ಅನುದಾನ ಲಭಿಸುವುದಿಲ್ಲ. ಜಾಗದ ಜಿಪಿಎಸ್ ಮಾಡಿದ ಬಳಿಕ ಆರೋಗ್ಯ ಕೇಂದ್ರ ಟೆಂಡರ್ ಪ್ರಕ್ರಿಯೆ ನಡೆದಿದೆ. ಕ್ರೀಡೆಗೆ ಇತರೆಡೆ ಅವಕಾಶವಿದೆ. ಆರೋಗ್ಯ ಕೇಂದ್ರ ನಿಗದಿತ ಜಾಗದಲ್ಲೇ ಕಟ್ಟಡ ನಿರ್ಮಾಣ ಅನಿವಾರ್ಯತೆಯಿದೆ. ಹೆಚ್ಚು ಕಡಿಮೆ ಮಾಡಿದರೆ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂಬ ಎಚ್ಚರಿಕೆ ಸ್ಥಳೀಯರಿಂದ ವ್ಯಕ್ತವಾಗಿದೆ.
ಆರೋಗ್ಯ ಕಾಮಗಾರಿ ಟೆಂಡರ್ ಆಗಿ ಆರು ತಿಂಗಳಲ್ಲಿ ಕಾಮಗಾರಿಯನ್ನು ಮುಗಿಸಬೇಕಾಗಿದೆ. ಅವಧಿ ಮುಗಿಯುತ್ತಾ ಬಂದರೂ ಕೆಲಸ ಪ್ರಾರಂಭ ಮಾಡದಿರುವ ವಿಚಾರದಲ್ಲಿ ಪ್ರಶ್ನಿಸಿದಾಗ ಆಕ್ಷೇಪ ಇರುವುದು ಬೆಳಕಿಗೆ ಬಂದಿದೆ.
ಅನುದಾನ ತರುವುದರಲ್ಲಿ ಪೈಪೋಟಿ ಮಾಡುವುದು ಬಿಟ್ಟು, ಅಭಿವೃದ್ಧಿಗೆ ಕಲ್ಲು ಹಾಕುವ ಕಾರ್ಯ ಸರಿಯಲ್ಲ. ಅಭಿವೃದ್ಧಿ ನಡೆಯಬಾರದು, ರಾಜಕೀಯವಾಗಿ ತೊಂದರೆ ಯಾಗುತ್ತದೆ ಎಂದು ತಡೆಯುವ ಪ್ರಯತ್ನವಾಗುತ್ತಿದೆ. ಊರಿಗೆ ಆಸ್ಪತ್ರೆ ಬೇಕು. ಬೇರೆ ಸರ್ಕಾರಿ ಜಾಗದಲ್ಲಿ ಕಟ್ಟಡ ಮಾಡಿದರೆ ಅದು ಆಸ್ಪತ್ರೆಯ ಕಟ್ಟಡವಾಗುವುದಿಲ್ಲ ಎಂದರು.
ಪ್ರಮುಖರಾದ ಅಶ್ರಫ್, ಫೆಲಿಕ್ಸ್, ತಿಮ್ಮಪ್ಪ ರೈ, ರಾಮಯ್ಯ ಶೆಟ್ಟಿ, ಗುರುವಪ್ಪ ಮುಗೇರ, ಸಂಜೀವಿ, ರತ್ನ, ಕೃಷ್ಣಪ್ಪ ನಾಯ್ಕ, ಎಚ್. ಶರೀಫ್ ಉಪಸ್ಥಿತರಿದ್ದರು.





