ಉಪ್ಪಿನಂಗಡಿ: ಲಕ್ಕಿ ಗ್ರಾಹಕರಾಗಿ ಆಯ್ಕೆಯಾದ ಮೆಸೇಜ್, 8,800 ರೂ. ಮುಖಬೆಲೆಯ ಮೊಬೈಲ್ ಫೋನ್ ಅನ್ನು 1,785 ರೂ. ಆಫರ್, ಮೊಬೈಲ್ ಫೋನ್ ಬದಲು ಬಂದಿದ್ದು ಏನು ಗೊತ್ತೇ?
ಉಪ್ಪಿನಂಗಡಿ : ಅದೃಷ್ಟ (ಲಕ್ಕಿ ) ಗ್ರಾಹಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ 8,800 ರೂ. ಮುಖಬೆಲೆಯ ಮೊಬೈಲ್ ಫೋನ್ ಅನ್ನು 1,785 ರೂ.ಗೆ ಕಳುಹಿಸಲಾಗಿದೆ ಎನ್ನುವ ಸಂದೇಶವನ್ನು ನಂಬಿ ಅಂಚೆ ಮೂಲಕ ಬಂದ ಪಾರ್ಸೆಲ್ ಖರೀದಿಸಿದ ವ್ಯಕ್ತಿಯೋರ್ವರಿಗೆ ಮೊಬೈಲ್ ಫೋನ್ ಬದಲು ಕೆಟ್ಟು ಹೋದ ತಿಂಡಿಯ ಪೊಟ್ಟಣ ಕಳುಹಿಸಿ ವಂಚಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಉಪ್ಪಿನಂಗಡಿಯ ದೇಗುಲವೊಂದರಲ್ಲಿ ಭದ್ರತಾ ಸಿಬಂದಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಭವಾನಿ ಶಂಕರ್ ಇತ್ತೀಚೆಗೆ ತನ್ನ ಮನೆಮಂದಿಗೆಂದು ಮೂರು ವಿವೋ ಕಂಪೆನಿಯ ಮೊಬೈಲ್ ಫೋನ್‌ಗಳನ್ನು ಖರೀದಿಸಿದ್ದರು.
ಇದರ ಬಳಿಕ ಅವರ ಮೊಬೈಲ್‌ಗೆ ಕರೆಯೊಂದನ್ನು ಮಾಡಿದ ಸಂಸ್ಥೆಯ ಅಧಿಕಾರಿ ಎನ್ನಲಾದ ವ್ಯಕ್ತಿ ಮೂರು ಮೊಬೈಲ್ ಖರೀದಿಸಿದ್ದಕ್ಕೆ ಸಂಸ್ಥೆಯ ಲಕ್ಕಿ ಗ್ರಾಹಕರಾಗಿ ನೀವು ಆಯ್ಕೆಯಾಗಿದ್ದೀರಿ. ಈ ಹಿನ್ನೆಲೆಯಲ್ಲಿ 8,800 ರೂ. ಬೆಲೆಯ ಮೊಬೈಲ್ ಅನ್ನು ಕೇವಲ 1,785 ರೂ.ಗೆ ಕಳುಹಿಸಲಾಗುವುದು. ಹಣ ತೆತ್ತು ಅಂಚೆ ಕಚೇರಿಯಿಂದ ಪಡೆದುಕೊಳ್ಳಿ ಎಂದು ತಿಳಿಸಿದ್ದರು.




