ಕಳೆದ ಒಂದು ತಿಂಗಳಿನಿಂದ ಕಣ್ಮರೆಯಾದ ಮಾಣಿಯ ಜೀವರಕ್ಷಕ ಆಂಬ್ಯುಲೆನ್ಸ್: ಅಪಘಾತ ಸಂಭವಿಸಿದರೆ ಸಾಕು ಗಾಯಾಳುಗಳ ಪರದಾಟ
ವಿಟ್ಲ: ಅಪಘಾತ ವಲಯವೆಂದೇ ಕರೆಸಿಕೊಳ್ಳುವ ಮಾಣಿ ಭಾಗದಲ್ಲಿ ಒಂದು ಅಪಘಾತ ಸಂಭವಿಸಿದರೆ ಸಾಕು ಜನರು ಪರದಾಟ ನಡೆಸುವಂತಾಗಿದೆ.
ವಿಟ್ಲ ಠಾಣಾ ವ್ಯಾಪ್ತಿಗೆ ಬರುವ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ, ಬುಡೋಳಿ, ಸೂರಿಕುಮೇರು ಭಾಗದಲ್ಲಿ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿರುತ್ತದೆ. ಹೆಚ್ಚಿನ ಅಪಘಾತ ಸಂಭವಿಸುತ್ತದೆ ಎಂಬ ಕಾರಣಕ್ಕೆ ಮಾಣಿ ಕೇಂದ್ರ ಸ್ಥಾನದಲ್ಲಿ 108 ಆಂಬ್ಯುಲೆನ್ಸ್ ಅನ್ನು ನಿಯೋಜಿಸಲಾಗಿತ್ತು. ಇದರಿಂದ ಸುತ್ತಮುತ್ತಲಿನ ಭಾಗದಲ್ಲಿ ಅಪಘಾತದ ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲು ನೆರವಾಗುತ್ತಿತ್ತು. ಇದರಿಂದ ಹಲವು ಪ್ರಾಣ ರಕ್ಷಿಸಲು ಸಹಕಾರಿಯಾಗಿತ್ತು. ಇದೀಗ ಜೀವ ರಕ್ಷಕ ಎಂದು ಕರೆಸಿಕೊಳ್ಳುತ್ತಿದ್ದ ಆಂಬ್ಯುಲೆನ್ಸ್
ರಿಪೇರಿಗೆಂದು ಒಂದು ತಿಂಗಳ ಹಿಂದೆ ಹೋಗಿದ್ದು ಈ ತನಕ ಬಂದಿಲ್ಲ. ಬುಡೋಳಿ ಬಳಿ ಅಪಘಾತ ನಡೆದು 4ಜನರು ಗಂಭೀರ ಗಾಯಗೊಂಡು ಒಬ್ಬರನ್ನು ಮಾಣಿಯ ಸೋಷಿಯಲ್ ಇಕ್ವ ಆಂಬ್ಯುಲೆನ್ಸ್ ಮೂಲಕ ಮಂಗಳೂರಿಗೆ ಸಾಗಿಸಿದರೆ ಉಳಿದ ಮೂವರು ಮಾಣಿಯ ಸರಕಾರಿ ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್ ಇಲ್ಲದೆ ಇದ್ದಾಗ ದೂರದ ವಿಟ್ಲದಿಂದ 108 ಆಂಬ್ಯುಲೆನ್ಸ್ ಆಗಮಿಸಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಇತ್ತೀಚೆಗೆ ಮಧ್ಯೆರಾತ್ರಿ ನಡೆದ ಅಪಘಾತದಲ್ಲಿ ಗಾಯಗೊಂಡವರನ್ನು ಮಾಣಿಯ ಇಕ್ವ ಅಂಬ್ಯುಲೆನ್ಸ್ ಮೂಲಕ ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿತ್ತು. ಈ ಭಾಗದಲ್ಲಿ ಇದೀಗ ಹೈವೆ ಕಾಮಗಾರಿ ನಡೆಯುತ್ತಿದ್ದು, ಈ ಸಂದರ್ಭ ಅಪಘಾತ ಸಂಖ್ಯೆ ಹೆಚ್ಚಳವಾಗುತ್ತಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ವಿಟ್ಲ, ಪುತ್ತೂರು, ಬಂಟ್ವಾಳ 108 ಆಂಬ್ಯುಲೆನ್ಸ್ ಗೆ ಕಾಯಬೇಕಾದ ಅನಿವಾರ್ಯತೆ ಇದೆ. ತಕ್ಷಣವೇ ಈ ಬಗ್ಗೆ ಗಮನಹರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.





