April 5, 2025

ಸರ್ಕಾರಿ ಬಸ್, ಎರಡು ಕಾರುಗಳ ನಡುವೆ ಭೀಕರ ಅಪಘಾತ: 3 ತಿಂಗಳ ಮಗು ಸೇರಿದಂತೆ ಒಂದೇ ಕುಟುಂಬದ ಮೂವರು ಸಾವು, ನಾಲ್ವರು ಗಂಭೀರ

0

ವಿಜಯಪುರ: ಸರ್ಕಾರಿ ಬಸ್ ಹಾಗೂ ಎರಡು ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿ ಮೂರು ತಿಂಗಳ ಮಗು ಹಾಗೂ ಬಾಣಂತಿ ಸೇರಿದಂತೆ ಒಂದೇ ಕುಟುಂಬದ ಮೂವರು ಸಾವಿಗೀಡಾಗಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೊಲ್ಹಾರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 218 ರ ಕುಪಕಡ್ಡಿ ಕ್ರಾಸ್ ಬಳಿ ಬುಧವಾರ ಸಂಜೆ ನಡೆದಿದೆ.

ಕಲಬುರಗಿ ಮೂಲದ ಕಲಶೆಟ್ಟಿ ಕುಟುಂಬದವರಾದ ತಾಯಿ ಸುನಂದಾ ಮಲ್ಲಿಕಾರ್ಜುನ ಕಲಶೆಟ್ಟಿ( 25) ಹಾಗೂ ಮಗು ಸುಮನ್ (3 ತಿಂಗಳು) ಕಾರಿನಲ್ಲೇ ಮೃತಪಟ್ಟರೇ ಶರಣಮ್ಮ ಬಸವರಾಜ್ ಕಲಶೆಟ್ಟಿ (55) ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಅಪಘಾತದಲ್ಲಿ ಉಮೇಶ ಕಲಶೆಟ್ಟಿ ಮತ್ತು ಅವರ ಪತ್ನಿ ಸುರೇಖಾ ಹಾಗೂ ಮಕ್ಕಳಾದ ಸುಹಾನ್ (8 ತಿಂಗಳು) ಮತ್ತು ಸಾನ್ವಿ (2) ಗಂಭೀರವಾಗಿ ಗಾಯಗೊಂಡಿದ್ದಾರೆ.

ಬಾಗಲಕೋಟೆಯಿಂದ ವಿಜಯಪುರಕ್ಕೆ ಹೋಗುತ್ತಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗೆ ಎದುರಿಗೆ ಬರುತ್ತಿದ್ದ ಎರಡು ಕಾರುಗಳಲ್ಲಿ ಒಂದು ಕಾರು ಹಿಂದಿಕ್ಕುವ ( ಓವರಟೇಕ್) ಬರದಲ್ಲಿ ಎರಡು ಕಾರುಗಳು ಬಸ್ ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.
ಕಲಶೆಟ್ಟಿ ಕುಟುಂಬದವರು (KA 32 Z 1706) ಕಿಯಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.

 

 


ವಿಜಯಪುರ ಮೂಲದ ಬಲೆನೋ ಕಾರಿ( KA 28 Z 5645) ನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಘಾತದ ನಂತರ ಸ್ಥಳದಲ್ಲೇ ಕಾರು ಬಿಟ್ಟು ಪರಾರಿಯಾಗಿದ್ದಾರೆ.

ಪಿಎಸ್ಐ ಪ್ರೀತಮ್ ನಾಯಕ್ ಮತ್ತು ಪೊಲೀಸ್ ಸಿಬ್ಬಂದಿ ಘಟನಾಸ್ಥಳಕ್ಕೆ‌ ಧಾವಿಸಿ ಸ್ಥಳೀಯರ ಸಹಕಾರದೊಂದಿಗೆ ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಘಟನೆ ಕುರಿತು ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!