ಸ್ಕೂಟರ್ ಮೇಲೆ ಲಾರಿ ಹರಿದು ಡಿಪ್ಲೋಮಾ ವಿದ್ಯಾರ್ಥಿನಿ ಮೃತ್ಯು
ಗುಂಡ್ಲುಪೇಟೆ: ಟೈಲ್ಸ್ ತುಂದಿಕೊಂಡು ತೆರಳುತ್ತಿದ್ದ ಲಾರಿ ವಿದ್ಯಾರ್ಥಿನಿ ಮೇಲೆ ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗ ಭಾನುವಾರ ನಡೆದಿದೆ.
ತಾಲೂಕಿನ ಕಣ್ಣೇಗಾಲ ಗ್ರಾಮದ ಪ್ರಿಯಾ(19) ಮೃತಪಟ್ಟ ವಿದ್ಯಾರ್ಥಿನಿ. ಈಗೆ ತಂದೆಯೊಂದಿಗೆ ಬೆಳಗ್ಗೆ ಸ್ಕೂಟರ್ ನಲ್ಲಿ ಹೋಗುತ್ತಿದ್ದ ವೇಳೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗ ಕೇರಳದಿಂದ ಟೈಲ್ಸ್ ತುಂಬಿಕೊಂಡು ಬೆಂಗಳೂರು ಕಡೆಗೆ ಹೋಗುತ್ತಿದ್ದ ಲಾರಿ ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದೆ. ಪ್ರಿಯಾ ತಂದೆ ರಾಜು ಮತ್ತು ತಂಗಿ ಅದೃಷ್ಟವಶಾತ್ ಪಾರಾಗಿದ್ದಾರೆ. ಇವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿದ್ಯಾರ್ಥಿನಿ ಪ್ರಿಯಾ ಚಾಮರಾಜನಗರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೋಮಾ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ.
ಕಣ್ಣೇಗಾಲದಿಂದ ರಾಜು ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಸ್ಕೂಟರ್ ನಲ್ಲಿ ಹೆಲ್ಮೇಟ್ ಧರಿಸದೆ ಬರುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ಮೂವರು ಕೆಳಗೆ ಬಿದ್ದಿದ್ದಾರೆ. ಸಹೋದರಿ ಮತ್ತು ತಂದೆ ಎಡಗಡೆಗೆ ಬಿದ್ದರೆ, ಪ್ರಿಯಾ ಬಲಗಡೆಗೆ ಬಿದ್ದಿದ್ದರಿಂದ ಪಕ್ಕದಲ್ಲೇ ಹಾದುಹೋಗುತ್ತಿದ್ದ ಟಿಪ್ಪರ್ ಹರಿದಿದೆ ಎನ್ನಲಾಗಿದೆ.
ನಂತರ ಶವವನ್ನು ಮರಣೋತ್ತರ ಪರೀಕ್ಷೆಗೆ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಪಟ್ಟಣ ಠಾಣೆ ಪೊಲೀಸರು ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.





