ಪದ್ಮಶ್ರೀ ಪ್ರಶಸ್ತಿ ಪಡೆಯಲು ದೆಹಲಿ ತಲುಪಿದ ಹಾಜಬ್ಬ:
ರಾಷ್ಟ್ರಪತಿ ಕೈಯಿಂದ ಪ್ರಶಸ್ತಿ ಸ್ವೀಕರಿಸಲಿರುವ ಅಕ್ಷರ ಸಂತ
ಮಂಗಳೂರು: ಭಾರತದ ಅತ್ಯುನ್ನತ, ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಅವರ ಕೈಯಿಂದಲೇ ಸ್ವೀಕರಿಸಲು ದ.ಕ ಜಿಲ್ಲೆಯ ಹರೇಕಳ ಹಾಜಬ್ಬ ಅವರು ದೆಹಲಿ ತಲುಪಿದ್ದಾರೆ.
ಇಂದು ಬೆಳಿಗ್ಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಜಿಲ್ಲಾಡಳಿತದ ಕಾರಿನಲ್ಲಿ ಆಗಮಿಸಿದ ಹಾಜಬ್ಬ ಅವರು, ಅಲ್ಲಿಂದ ದೆಹಲಿಗೆ ವಿಮಾನದ ಮೂಲಕ ತಲುಪಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಲು ಅಕ್ಷರ ಸಂತ ಹರೇಕಳ ಹಾಜಬ್ಬ ಅವರು ಭಾನುವಾರ ದೆಹಲಿ ಪ್ರಯಾಣ ನಡೆಸಿದರು.
ಮಂಗಳೂರು ವಿಮಾನ ನಿಲ್ದಾಣದಿಂದ ಅವರು ಸ್ಪೈಸ್ ಜೆಟ್ ವಿಮಾನದಲ್ಲಿ ದೇಶದ ರಾಜಧಾನಿಗೆ ತೆರಳಿದರು. ಎಂದಿನಂತೆ ಮೊಣ ಕಾಲಿನಿಂದ ಮೇಲೆ ಬಿಳಿ ಪಂಚೆ ಹಾಗೂ ಬಿಳಿ ಶರ್ಟ್ ಧರಿಸಿ ಕೈಯಲ್ಲೊಂದು ಕಪ್ಪು ಬ್ಯಾಗ್ ಹಿಡಿದುಕೊಂಡು ಅವರು ವಿಮಾನ ಏರಿದರು.
ಕಿತ್ತಲೆ ಮಾರಿ ಜೀವನ ಸಾಗಿಸುತ್ತಿದ್ದ ಹರೇಕಳ ಹಾಜಬ್ಬ ಅವರು ಶಿಕ್ಷಣ ಕ್ಷೇತ್ರದಲ್ಲಿ ಇಡೀ ದೇಶದಲ್ಲೇ ದೊಡ್ಡ ಹೆಸರು. ತಾನು ಅಕ್ಷರ ಕಲಿಯದಿದ್ದರೂ ತನ್ನೂರಿನ ಮಕ್ಕಳು ಅಕ್ಷರದಿಂದ ವಂಚಿತರಾಗಬಾರದೆಂದು ಭಗೀರಥ ಪ್ರಯತ್ನಪಟ್ಟು ತನ್ನೂರಿಗೆ ಸರಕಾರಿ ಶಾಲೆಯನ್ನು ತರಿಸಿದ್ದರು. ಅವರ ಪ್ರಯತ್ನದ ಫಲವಾಗಿ ಪ್ರಾಥಮಿಕ ಶಾಲೆ ಪ್ರೌಢಶಾಲೆಯಾಗಿ ರೂಪುಗೊಂಡಿದೆ. ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿ ನಾಳೆ ಅವರಿಗೆ ರಾಷ್ಟಪತಿ ಪ್ರದಾನ ಮಾಡಿ ಗೌರವಿಸಲಿದ್ದಾರೆ.





