ಕಡಬ: ಬಾವಿಗೆ ಬಿದ್ದ ಚಿರತೆಯನ್ನು ಯಶಸ್ವಿ ಕಾರ್ಯಾಚರಣೆ ಮೂಲಕ ರಕ್ಷಣೆ:
ಅರವಳಿಕೆ ಮದ್ದು ಚುಚ್ಚದೇ ಚಿರತೆಯನ್ನು ಉಪಾಯದಿಂದ ಬೋನಿಗೆ ಸೇರಿಸಿದ ಅರಣ್ಯ ಇಲಾಖೆ
ಕಡಬ: ಕಾಡಿನಿಂದ ನಾಡಿಗೆ ಬಂದು ಬಾವಿಗೆ ಬಿದ್ದ ಚಿರತೆಯನ್ನು ಯಶಸ್ವಿ ಕಾರ್ಯಾಚರಣೆಯ ಮೂಲಕ ಚಿರತೆಯನ್ನು ರಕ್ಷಿಸಲಾಗಿದೆ.
ಕೋಳಿಯನ್ನು ಹಿಡಿಯಲೆಂದು ಬಂದ ಚಿರತೆಯು ಕೊಂಬಾರು ಗ್ರಾಮದ ಕಮರ್ಕಜೆ ನಿವಾಸಿ ರಾಮಯ್ಯ ಗೌಡ ಎಂಬವರ ಮನೆಯ ಮುಂಭಾಗದ ಬಾವಿಗೆ ಬಿದ್ದಿದ್ದು, ಬಾವಿಯಿಂದ ನೀರು ಸೇದಲೆಂದು ತೆರಳಿದ ವೇಳೆ ಚಿರತೆ ಕಾಣಿಸಿಕೊಂಡಿದೆ ಎನ್ನಲಾಗಿದೆ. ವಿಷಯ ತಿಳಿದ ಊರವರು ಸ್ಥಳಕ್ಕೆ ಧಾವಿಸತೊಡಗಿದ್ದು, ತಕ್ಷಣವೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು.
ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿಗಳು ಸೂಕ್ತ ಭದ್ರತೆಯೊಂದಿಗೆ ಸಂಜೆಯ ವೇಳೆಗೆ ಚಿರತೆಯ ರಕ್ಷಣಾ ಕಾರ್ಯವನ್ನು ಆರಂಭಿಸಿದ್ದಾರೆ. ಬೋನು ತಂದು ಬಾವಿಯ ಕಟ್ಟೆಯ ಸಮೀಪ ಇಟ್ಟು ಬಾವಿಯ ಮೇಲಿನ ಭಾಗಕ್ಕೆ ಬಲೆ ಹಾಸಿ ಏಣಿ ಇಳಿಸಲಾಗಿದ್ದು, ಏಣಿ ಹತ್ತಿದ ಚಿರತೆಯು ನೇರವಾಗಿ ಬೋನಿಗೆ ಬಿದ್ದಿದೆ. ಈ ಮೂಲಕ ಊರವರ ಸಹಕಾರದೊಂದಿಗೆ ಚಿರತೆಯನ್ನು ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ.





