ನೂಜಿಬಾಳ್ತಿಲ: ರಸ್ತೆ ದುರವಸ್ಥೆ, ಅನಾರೋಗ್ಯ ಪೀಡಿತ ವೃದ್ಧೆಯನ್ನು ಮರದ ಬಡಿಗೆಗೆ ಸುತ್ತಿ ಹೊತ್ತುಕೊಂಡ ಆಸ್ಪತ್ರೆಗೆ ಸಾಗಾಟ
ಕಡಬ(ಉಪ್ಪಿನಂಗಡಿ):ನಿತ್ಯ ಕಾಡಾನೆ ಅಲೆದಾಡುವ ಪ್ರದೇಶದಲ್ಲಿ ರಸ್ತೆ ಸಮರ್ಪಕವಿಲ್ಲದ ಕಾರಣ ಅನಾರೋಗ್ಯಕ್ಕೆ ತುತ್ತಾದ ವೃದ್ದ ಮಹಿಳೆಯೊಬ್ಬರನ್ನು ಎರಡು ಕಿ.ಮೀ. ದೂರ ಮುಖ್ಯ ರಸ್ತೆಗೆ ಮರದ ಬಡಿಗೆಗೆ ಬಟ್ಟೆ ಕಟ್ಟಿ ಅದರಲ್ಲಿ ಕುಳ್ಳಿರಿಸಿ ಆಸ್ಪತ್ರೆಗೆ ಕರೆದೊಯ್ದ ಘಟನೆ ಇದು.
ದ.ಕ. ಜಿಲ್ಲೆಯ ಸುಳ್ಯ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಟ್ಟ ಕಡಬ ಸಮೀಪದ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಸಮೀಪದ ಬಳ್ಳಕ್ಕ ಎಂಬಲ್ಲಿ ಆ.19ರಂದು ಈ ಘಟನೆ ನಡೆದಿರುವುದಾಗಿದೆ. ಎಪ್ಪತ್ತು ವರ್ಷದ ವೃದ್ಧೆಯನ್ನು ಕಾಲು ನೋವಿನಿಂದ ನರಳುತ್ತಿದ್ದ ಹಿನ್ನೆಲೆಯಲ್ಲಿ ಎಂಜಿರ ಮೂಲಕ ಉಪ್ಪಿನಂಗಡಿಗೆ ತುರ್ತಾಗಿ ಕರೆದೊಯ್ಯಬೇಕಿತ್ತು. ಆದರೆ ರಸ್ತೆ ಇದ್ದರೂ ಅಭಿವೃದ್ದಿ ಕಾರಣ ಹಿನ್ನೆಲೆಯಲ್ಲಿ ವಾಹನ ಓಡಾಟ ಕಷ್ಟಕರವಾಗಿತ್ತು.
ಹೀಗಾಗಿ ಕುಟುಂಬಸ್ಥರು ಮರದ ಬಡಿಗೆಗೆ ಬಟ್ಟೆಯೊಂದನ್ನು ಕಟ್ಟಿ ಅದರಲ್ಲಿ ಮಹಿಳೆಯನ್ನು ಕುಳ್ಳಿರಿಸಿ ಎಂಜಿರ ಮುಖ್ಯ ರಸ್ತೆಗೆ ತಲುಪಿಸಿದ್ದಾರೆ.
ವೃದ್ದ ಮಹಿಳೆಯನ್ನು ಹೊತ್ತುಕೊಂಡು ಹೋಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನೂಜಿಬಾಳ್ತಿಲ-ಕೊಣಾಜೆ ಗ್ರಾಮವನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು ಈ ಭಾಗದ ಜನರಿಗೆ ಎಂಜಿರ ಹತ್ತಿರದ ಪೇಟೆಯಾಗಿದೆ.
ಇತ್ತೀಚೆಗೆ ಸುರಿದ ಮಹಾ ಮಳೆಗೆ ಈ ರಸ್ತೆ ಕೆಸರುಮಯವಾದ ಕಾರಣ ಈ ಭಾಗದ ಜನ ತಮ್ಮ ವಾಹನಗಳನ್ನು ಅರ್ಧ ದಾರಿಯಲ್ಲೇ ನಿಲ್ಲಿಸಿ ಕಿ.ಮೀ ಗಟ್ಟಲೆ ನಡೆದುಕೊಂಡು ಹೋಗಿ ಮನೆ ಸೇರುವ ಪರಿಸ್ಥಿತಿ ನಿರ್ಮಾಣವಾಗಿತ್ತು.




