ಒಂದೇ ಸಿಂರಿಂಜ್‌ನಿಂದ 39 ಮಕ್ಕಳಿಗೆ ಲಸಿಕೆ ನೀಡಿಕೆ: ಚುಚ್ಚುಮದ್ದುಗಾರನ ಬಂಧನ
ಭೋಪಾಲ್: ಒಂದೇ ಸಿಂರಿಂಜ್‌ನಿಂದ 39 ಮಕ್ಕಳಿಗೆ ಲಸಿಕೆ ನೀಡಿದ ಚುಚ್ಚುಮದ್ದುಗಾರರನ್ನು ಮಧ್ಯಪ್ರದೇಶ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಇದೇ ವೇಳೆ ಮುಖ್ಯ ಲಸಿಕಾಧಿಕಾರಿಯನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.
ಬಂಧಿತನನ್ನು ಜಿತೇಂದ್ರ ಎಂದು ಗುರುತಿಸಲಾಗಿದೆ. ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ವೇಳೆ ಘಟನೆ ನಡೆದಿದೆ. ಒಂದೇ ಸಿರಿಂಜ್‌ನಿಂದ 39 ಮಕ್ಕಳಿಗೆ ಈತ ಕೋವಿಡ್ ಲಸಿಕೆ ನೀಡಿದ್ದ.
ಇದನ್ನು ಪ್ರಶ್ನಿಸಿದಾಗ ಅಧಿಕಾರಿಗಳು ಒಂದೇ ಸಿರಿಂಜ್ ಕಳುಹಿಸಿಕೊಟ್ಟಿದ್ದರಲ್ಲದೆ, ಅದರಲ್ಲೇ ಲಸಿಕೆ ಹಾಕುವಂತೆ ವಿಭಾಗ ಮುಖ್ಯಸ್ಥರು ಆದೇಶಿಸಿದ್ದರು. ನಾನೇನು ಮಾಡಲಿ ಎಂದು ಆತ ಉಡಾಫೆ ಉತ್ತರ ನೀಡಿದ್ದ ಎನ್ನಲಾಗಿದೆ. ಆತ ಮಾತನಾಡಿರುವ ವೀಡಿಯೋ ವೈರಲ್ ಆಗಿದ್ದು, ಕೂಡಲೇ ಸಾಗರ್ ಜಿಲ್ಲಾಡಳಿತ ಆತನ ವಿರುದ್ದ ಎಫ್‌ಐಆರ್ ದಾಖಲಿಸಿತ್ತು.
ಕೇಂದ್ರ ಸರ್ಕಾರದ ‘ಒಂದು ಸೂಜಿ, ಒಂದು ಸಿರಿಂಜ್, ಒಂದು ಬಾರಿ’ ಪ್ರತಿಜ್ಞೆಯನ್ನು ನಿರ್ಲಕ್ಷ ಮತ್ತು ನಿರ್ದಾಕ್ಷಿಣ್ಯವಾಗಿ ಉಲ್ಲಂಘಿಸಿದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣ ದಾಖಲಾಗಿರುವುದು ತಿಳಿಯುತ್ತಿದ್ದಂತೆ ಜಿತೇಂದ್ರ ಪರಾರಿಯಾಗಿದ್ದ. ಇದೀಗ ಆತನನ್ನು ಪೊಲೀಸರು ಬಂಧಿಸಿದ್ದಾರೆ.