May 14, 2026

ಉತ್ತರ ಪ್ರದೇಶದ 5 ಜಿಲ್ಲೆಗಳಲ್ಲಿ ಭಾರಿ ಮಳೆ: 56 ಮಂದಿ ಮೃತ್ಯು

0
image_editor_output_image-1602993440-1778739080962.jpg

ಲಕ್ನೋ: ಉತ್ತರ ಪ್ರದೇಶದ ಭದೋಹಿ, ಫತೇಪುರ ಮತ್ತು ಬದಾಂವೂ ಸೇರಿದಂತೆ ಐದು ಜಿಲ್ಲೆಗಳಲ್ಲಿ ಬುಧವಾರ ಸಂಭವಿಸಿದ ಭಾರಿ ಮಳೆ ಮತ್ತು ಬಿರುಗಾಳಿಗೆ 56 ಜನರು ಮೃತಪಟ್ಟಿದ್ದಾರೆ. ಬಿರುಗಾಳಿಯ ಅಬ್ಬರಕ್ಕೆ ನೂರಾರು ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಜನಜೀವನ ಸಂಪೂರ್ಣ ಸ್ತಬ್ಧವಾಗಿದೆ.

ಅಧಿಕಾರಿಗಳು ನೀಡಿರುವ ಮಾಹಿತಿಯಂತೆ, ಭದೋಹಿ ಜಿಲ್ಲೆಯೊಂದರಲ್ಲೇ ಅತಿ ಹೆಚ್ಚು ಅಂದರೆ 16 ಜನರು ಸಾವಿಗೀಡಾಗಿದ್ದಾರೆ. ಫತೇಪುರದಲ್ಲಿ 9, ಬದಾಂವೂನಲ್ಲಿ 5, ಚಂದೌಲಿಯಲ್ಲಿ ಇಬ್ಬರು ಹಾಗೂ ಸೋನ್‌ಭದ್ರದಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಸಿಡಿಲು ಬಡಿತ ಮತ್ತು ಗೋಡೆ ಕುಸಿತದಂತಹ ಘಟನೆಗಳು ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣ ಎನ್ನಲಾಗಿದೆ.

ಬಿರುಗಾಳಿಯ ಕಾರಣದಿಂದಾಗಿ ಮೊಬೈಲ್ ನೆಟ್‌ವರ್ಕ್‌ಗಳು ಸ್ಥಗಿತಗೊಂಡಿದ್ದು, ರಕ್ಷಣಾ ಕಾರ್ಯಕರ್ತರು ಸಂತ್ರಸ್ತರನ್ನು ತಲುಪಲು ಹರಸಾಹಸ ಪಡುತ್ತಿದ್ದಾರೆ. “ಹಲವು ಕಡೆ ರಸ್ತೆಗಳು ಬಂದ್ ಆಗಿದ್ದು, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ನೆಟ್‌ವರ್ಕ್‌ ಸಮಸ್ಯೆಯು ರಕ್ಷಣಾ ಕಾರ್ಯಾಚರಣೆಗೆ ದೊಡ್ಡ ಸವಾಲಾಗಿದೆ,” ಎಂದು ಭದೋಹಿಯ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಕುನ್ವರ್ ವೀರೇಂದ್ರ ಕುಮಾರ್ ಮೌರ್ಯ ತಿಳಿಸಿದ್ದಾರೆ.

ದುರಂತದ ಬಗ್ಗೆ ತೀವ್ರ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಸಂತ್ರಸ್ತ ಕುಟುಂಬಗಳಿಗೆ 24 ಗಂಟೆಗಳ ಒಳಗೆ ಪರಿಹಾರ ಧನ ವಿತರಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. “ಕೃಷಿ ಮತ್ತು ಕಂದಾಯ ಇಲಾಖೆಗಳು ತಕ್ಷಣವೇ ಬೆಳೆ ಹಾನಿ ಹಾಗೂ ಆಸ್ತಿ ಪಾಸ್ತಿ ಹಾನಿಯ ಸಮೀಕ್ಷೆ ನಡೆಸಿ ವರದಿ ಸಲ್ಲಿಸಬೇಕು. ಪರಿಹಾರ ಕಾರ್ಯದಲ್ಲಿ ವಿಳಂಬವಾದರೆ ಸಹಿಸುವುದಿಲ್ಲ,” ಎಂದು ಅವರು ಎಚ್ಚರಿಸಿದ್ದಾರೆ. ಅಲ್ಲದೆ, ಮೃತಪಟ್ಟ ಜಾನುವಾರುಗಳಿಗೂ ಸೂಕ್ತ ಪರಿಹಾರ ನೀಡುವಂತೆ ಸೂಚನೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!