May 14, 2026

ವಿಟ್ಲ ಭಾಗದಲ್ಲಿ ವಿಮಾನ ಹಾರಾಟ-ಜನರಲ್ಲಿ ಆತಂಕ: ಕಾರಣವೇನು?

0
IMG-20260514-WA0000.jpg

ವಿಟ್ಲ: ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವೊಂದು ವಿಟ್ಲ, ಕಲ್ಲಡ್ಕ ಪರಿಸರದ ಆಕಾಶದಲ್ಲಿ ಸುಮಾರು ಎಂಟಕ್ಕೂ ಹೆಚ್ಚು ಸುತ್ತುಗಳನ್ನು ಹೊಡೆದ ಘಟನೆ ಗುರುವಾರ ಸಂಜೆ ನಡೆದಿದ್ದು, ಸ್ಥಳೀಯ ಜನರಲ್ಲಿ ಕೆಲಕಾಲ ಭೀತಿ ಮತ್ತು ಆತಂಕ ಮೂಡಿಸಿದೆ.

ಬೆಂಗಳೂರಿನಿಂದ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಯ IX2924 (ಬೋಯಿಂಗ್ 737 MAX 8) ವಿಮಾನವು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ, ವಿಟ್ಲ ಆಕಾಶ ಭಾಗಕ್ಕೆ ಬರುತ್ತಿದ್ದಂತೆ ವಿಮಾನವು ಅತ್ಯಂತ ಕೆಳಮಟ್ಟದಲ್ಲಿ (ಸುಮಾರು 2,650 ಅಡಿ ಎತ್ತರದಲ್ಲಿ) ವೃತ್ತಾಕಾರದಲ್ಲಿ ನಿರಂತರ ಸುತ್ತು ಹೊಡೆಯಲಾರಂಭಿಸಿತು. ಇದನ್ನು ಗಮನಿಸಿದ ಸಾರ್ವಜನಿಕರು ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರಬಹುದು ಎಂದು ಭಾವಿಸಿ ತೀವ್ರ ಆತಂಕ ವ್ಯಕ್ತಪಡಿಸಿದರು. ಫ್ಲೈಟ್‌ ರಾಡಾರ್ ಅಪ್ಲಿಕೇಶನ್‌ನಲ್ಲೂ ವಿಮಾನವು ಒಂದೇ ಕಡೆ ಸುತ್ತುತ್ತಿರುವುದು ದಾಖಲಾಗಿದೆ.

ಆತಂಕ ಬೇಡ, ಇದು ಸಾಮಾನ್ಯ ವಾಯುಯಾನ ಪ್ರಕ್ರಿಯೆ: ಸಾಮಾನ್ಯವಾಗಿ ವಿಮಾನ ನಿಲ್ದಾಣದ ಸುತ್ತಮುತ್ತ ಹಠಾತ್ ಗಾಳಿ, ಭಾರೀ ಮಳೆ ಅಥವಾ ದಟ್ಟವಾದ ಮೋಡಗಳಿದ್ದಾಗ ರನ್‌ವೇ ಸ್ಪಷ್ಟವಾಗಿ ಕಾಣಿಸುವುದಿಲ್ಲ. ಮಂಗಳೂರು ಕರಾವಳಿ ಭಾಗದಲ್ಲಿ ಸದ್ಯ ಹವಾಮಾನ ವೈಪರೀತ್ಯ ಹಾಗೂ ಮಳೆಯ ವಾತಾವರಣ ಇರುವುದರಿಂದ, ಸುರಕ್ಷತೆಯ ದೃಷ್ಟಿಯಿಂದ ಪೈಲಟ್‌ಗಳು ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲ್ (ATC) ಅಧಿಕಾರಿಗಳ ಸೂಚನೆಯಂತೆ ಹವಾಮಾನ ತಿಳಿಯಾಗುವವರೆಗೆ ಆಕಾಶದಲ್ಲೇ ಕಾಯುತ್ತಾರೆ. ಇದನ್ನು ವಾಯುಯಾನದ ಭಾಷೆಯಲ್ಲಿ ‘ಹೋಲ್ಡಿಂಗ್ ಪ್ಯಾಟರ್ನ್’ (Holding Pattern) ಎನ್ನಲಾಗುತ್ತದೆ. ಎರಡು ವಿಮಾನಗಳು ‘ಹೋಲ್ಡಿಂಗ್ ಪ್ಯಾಟರ್ನ್’ ಮುಗಿಸಿ ಸುರಕ್ಷಿತವಾಗಿ ಇಳಿದಿವೆ.

ಯಾವುದೇ ತಾಂತ್ರಿಕ ದೋಷ ಅಥವಾ ತುರ್ತು ಪರಿಸ್ಥಿತಿ ಇರಲಿಲ್ಲ. ವಿಟ್ಲ ಪರಿಸರದಲ್ಲಿ ಸುತ್ತುಗಳನ್ನು ಮುಗಿಸಿದ ವಿಮಾನವು ಬಳಿಕ ಮೂಡಬಿದಿರೆ ಮಾರ್ಗವಾಗಿ ಮಂಗಳೂರು ವಿಮಾನ ನಿಲ್ದಾಣದತ್ತ ಸಾಗಿದ್ದು, ಸುರಕ್ಷಿತವಾಗಿ ಇಳಿದಿದೆ ಎಂದು ತಿಳಿದು ಬಂದಿದೆ. . ಹಾಗಾಗಿ ಸಾರ್ವಜನಿಕರು ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡದೆ, ಆತಂಕ ಪಡಬಾರದು ಎಂದು ವಾಯುಯಾನದ ತಜ್ಞರು ತಿಳಿಸಿದ್ದಾರೆ. ಸದ್ಯ ಈ ಬಗ್ಗೆ ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನಿಂದ ಹೊರಟಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಮಂಗಳೂರಿನಾದ್ಯಂತ ಹವಾಮಾನ ವೈಪರಿತ್ಯದಿಂದ ಲ್ಯಾಂಡ್‌ ಆಗಿರಲಿಲ್ಲ. ಈ ಹಿನ್ನೆಲೆ ಬಂಟ್ವಾಳ, ಕಲ್ಲಡ್ಕ, ವಿಟ್ಲ ಆಸುಪಾಸಿನಲ್ಲಿ ಕಾಣಿಸಿಕೊಂಡಿತ್ತು. ಈ ಬಗ್ಗೆ ವಿಮಾನ ನಿಲ್ಧಾಣದ ಸಾರ್ವಜನಿಕ ಸಂಪರ್ಕಾಧಿಕಾರಿ ಸ್ಪಷ್ಟನೆ ನೀಡಿ ಎರಡೂ ವಿಮಾನಗಳು ಸುರಕ್ಷಿತವಾಗಿ ಲ್ಯಾಂಡ್‌ ಆಗಿದ್ದು ಎಂದು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!