August 12, 2026

ಉಳ್ಳಾಲ: ರಾಷ್ಟ್ರೀಯ ಹೆದ್ದಾರಿಯ ರಸ್ತೆ ಗುಂಡಿಗೆ ಬಿದ್ದು ವಿದ್ಯಾರ್ಥಿನಿ ಗಂಭೀರ ಗಾಯ

0
Screenshot_20220725-204422_UC-Browser.jpg

ಉಳ್ಳಾಲ: ರಾಷ್ಟ್ರೀಯ ಹೆದ್ದಾರಿಯ ರಸ್ತೆ ಗುಂಡಿಗೆ ಬಿದ್ದು ವಿದ್ಯಾರ್ಥಿನಿಯೊಬ್ಬಳು ಗಂಭೀರ ಗಾಯಗೊಂಡು ಪರೀಕ್ಷೆ ಬರೆಯಲಾರದೆ ಒಂದು ಶೈಕ್ಷಣಿಕ ವರ್ಷವನ್ನು ಕಳೆದುಕೊಂಡ ಘಟನೆ ಇತ್ತೀಚೆಗೆ ನೇತ್ರಾವತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯದ ಪರಿಸರ ವಿಜ್ಞಾನ ವಿಭಾಗದ ದ್ವಿತೀಯ ವರ್ಷದ ಎಂ.ಎಸ್ಸಿ ವಿದ್ಯಾರ್ಥಿನಿ, ಕೊಟ್ಟಾರ ನಿವಾಸಿ ನಿಶ್ಮಿತಾ (19) ಗಾಯಾಳು.

ಜು.22 ರಂದು ಸಂಜೆ ಕೊಣಾಜೆ ಕಡೆಯಿಂದ ಮಂಗಳೂರಿಗೆ ತನ್ನ ಸ್ಕೂಟಿ ವಾಹನದಲ್ಲಿ ತೆರಳುವ ಸಂದರ್ಭ ಜೋರಾಗಿ ಮಳೆಯಾಗುತಿತ್ತು. ರಾಷ್ಟ್ರೀಯ ಹೆದ್ದಾರಿ 66ರ ನೇತ್ರಾವತಿ ಸೇತುವೆಯಲ್ಲಿ ಪ್ರಯಾಣಿಸುವ ಸಂದರ್ಭ ಸೇತುವೆ ಮಧ್ಯಭಾಗದಲ್ಲಿ ಬೃಹತ್‌ ಗಾತ್ರದ ಹೊಂಡಕ್ಕೆ ಸ್ಕೂಟಿ ಸಿಲುಕಿ ರಸ್ತೆಗೆ ಉರುಳಿದೆ. ಮಳೆ ನೀರು ತುಂಬಿದ್ದರಿಂದ ಹೊಂಡದ ಅರಿವು ಆಕೆಗೆ ಬಂದಿರಲಿಲ್ಲ. ರಸ್ತೆಯಲ್ಲಿ ಗಂಭೀರ ಗಾಯಗೊಂಡು ಬಿದ್ದ ವಿದ್ಯಾರ್ಥಿನಿಯನ್ನು ಕಂಡ ರಿಕ್ಷಾ ಚಾಲಕರೊಬ್ಬರು ತಕ್ಷಣ ಆಕೆಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಬಲಗೈ ಮೂಳೆ ಮುರಿತಕ್ಕೊಳಗಾಗಿರುವುದು ಎಕ್ಸ್‌ ರೇ ಮೂಲ ಗೊತ್ತಾಗಿದೆ. ಅಲ್ಲದೆ ಕೈ ಹಾಗೂ ಮೈ ಪೂರ್ತಿ ಅಲ್ಲಲ್ಲಿ ಗಾಯಗಳೂ ಆಗಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು.

ಬಲಗೈ ಮೂಳೆ ಜೋಡಿಸಲು ಶಸ್ರ್ತಚಿಕಿತ್ಸೆ ನಡೆಸಿ ರಾಡನ್ನು ಅಳವಡಿಸಲಾಗಿದೆ. ಮುಂದಿನ ಆರು ತಿಂಗಳುಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. ಈ ಮಧ್ಯೆ ವಾರ್ಷಿಕ ಪರೀಕ್ಷೆ ಬರುವುದರಿಂದ ಅದನ್ನು ಬರೆಯಲು ಅಸಾಧ್ಯವಾಗಿದೆ. ಈ ಮೂಲಕ ಒಂದು ಶೈಕ್ಷಣಿಕ ವರ್ಷವನ್ನು ಕಳೆದುಕೊಂಡಂತಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ʻಅಂದು ಪ್ರಾಜೆಕ್ಟ್‌ ಕೆಲಸಗಳಿದ್ದುದರಿಂದ ಸ್ಕೂಟರನ್ನು ಕಾಲೇಜಿಗೆ ತಂದಿದ್ದೆನು. ಮನೆಗೆ ವಾಪಸ್ಸು ಮರಳುವ ವೇಳೆ ನೇತ್ರಾವತಿ ಸೇತುವೆಯಲ್ಲಿನ ಹೊಂಡ ಅರಿವಿಗೆ ಬಾರದೆ ಬಿದ್ದು ಕೈ ಮುರಿತಕ್ಕೊಳಗಾಗಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದೇನೆ. ಎಂ.ಎಸ್ಸಿ ಅಂತಿಮ ವರ್ಷವಾಗಿರುವುದರಿಂದ ಆಗಸ್ಟ್ ತಿಂಗಳಿನಲ್ಲಿ ಆಂತರಿಕ ಪರೀಕ್ಷೆಗಳಿವೆ. ಅದನ್ನು ಎದುರಿಸಲು ಸಾಧ್ಯವಿಲ್ಲ. ಜೊತೆಗೆ ಆ.12 ರಂದು ಯುಜಿಸಿ ಪರೀಕ್ಷೆಯೂ ಇರುವುದರಿಂದ ಭವಿಷ್ಯವೇ ಅತಂತ್ರವಾಗಿದೆ.

ಶಸ್ತ್ರಚಿಕಿತ್ಸೆಗೆ ಈವರೆಗೆ ರೂ.65,000 ಖರ್ಚನ್ನು ಹೆತ್ತವರು ಭರಿಸಿದ್ದಾರೆ. ಆಸ್ಪತ್ರೆ ಬಿಲ್‌ ಇನ್ನು ಬರಬೇಕಿದೆ. ಹೆದ್ದಾರಿ ಅವ್ಯವಸ್ಥೆಯೇ ಅಪಘಾತಕ್ಕೆ ಕಾರಣ. ಪ್ರಕರಣ ಯಾರ ಮೇಲೆ ದಾಖಲಿಸುವುದೇ ಗೊಂದಲದಲ್ಲಿರುವುದರಿಂದ ಅದನ್ನು ಕೈಬಿಟ್ಟಿದ್ದೇವೆ ಎನ್ನುತ್ತಾರೆ ಗಾಯಾಳು ವಿದ್ಯಾರ್ಥಿನಿ ನಿಶ್ಮಿತಾ. ಇದೊಂದೇ ಘಟನೆ ಅಲ್ಲ ಬದಲಾಗಿ ಇಂತಹ ಹಲವು ಘಟನೆಗಳು ದಿನಂಪ್ರತಿ ಜಿಲ್ಲೆಯಲ್ಲಿ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವು ಗುಂಡಿಗಳು ಇದ್ದರೂ ಟೋಲ್‌ ವಸೂಲಿಗೆ ತೆಗೆದುಕೊಂಡ ಆಸಕ್ತಿ ರಸ್ತೆ ರಿಪೇರಿಗೆ ತೆಗೆದುಕೊಂಡಂತಿಲ್ಲ.

Leave a Reply

Your email address will not be published. Required fields are marked *

You may have missed

error: Content is protected !!