ಪುತ್ತೂರು: ಅಂತರ್‌ರಾಜ್ಯ ಸರ ಕಳ್ಳತನದ ಇಬ್ಬರು ಆರೋಪಿಗಳ ಬಂಧನ: ಎರಡು ಮೋಟಾರು ಸೈಕಲ್ ಹಾಗೂ ಚಿನ್ನಾಭರಣ ವಶಕ್ಕೆ
ಪುತ್ತೂರು: ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಗೆ ಮತ್ತು ಪುತ್ತೂರು ಗ್ರಾಮಾಂತರ ಠಾಣಾ ಪಿಎಸ್‌ಐ ಉದಯರವಿ ಎಂ.ರವರ ನೇತೃತ್ವದ ವಿಶೇಷ ತಂಡ ಅಂತರ್‌ರಾಜ್ಯ ಸರ ಕಳ್ಳತನದ ಇಬ್ಬರು ಆರೋಪಿಗಳನ್ನು ಬಂಧಿಸಿ ಎರಡು ಮೋಟಾರು ಸೈಕಲ್ ಹಾಗೂ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.
ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ನಿಡ್ನಳ್ಳಿ ಗ್ರಾಮದ ಚೂರಿಪದವು ನಿವಾಸಿ ಶೀನ ನಾಯ್ಕರರ ಪತ್ನಿ (೫೫ ವ) ಎಂಬವರು ಜೂ.೦೭.ರಂದು ಬೆಳಿಗ್ಗೆ ತನ್ನ ಮನೆ ಚೂರಿಪದವಿನಿಂದ ರೆಂಜಕ್ಕೆ ಬಂದು ಪುನಃ ತನ್ನ ಮನೆಗೆ ಹೋಗುತ್ತಿರುವ ಸಂದರ್ಭದಲ್ಲಿ ಬೆಟ್ಟಂಪಾಡಿ ಗ್ರಾಮದ ಕೋನಡ್ಕ ಎಂಬಲ್ಲಿ ಇಬ್ಬರು ವ್ಯಕ್ತಿಗಳು ಕೆಂಪು ಬಣ್ಣದ ಮೋಟಾರು ಸೈಕಲಿನಲ್ಲಿ ಬಂದು ರತ್ನಾರವರ ಕುತ್ತಿಗೆಯಲ್ಲಿದ್ದ ಚಿನ್ನದ ಕರಿ ಮಣಿ ಸರವನ್ನು ಎಳೆದು ಬೈಕ್‌ನಲ್ಲಿ ಪರಾರಿಯಾಗಿದ್ದರು.
ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗಾಗಿ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಗೆ ಮತ್ತು ಪುತ್ತೂರು ಗ್ರಾಮಾಂತರ ಠಾಣಾ ಪಿಎಸ್‌ಐ ಉದಯರವಿ ಎಂ.ರವರ ನೇತೃತ್ವದ ವಿಶೇಷ ತಂಡ ಇಬ್ಬರು ಆರೋಪಿಗಳಾದ ಕಾಸರಗೋಡು ಕುಂಬ್ಲೆ ಬಂಬ್ರಾಣದ ಫಝಲ್ ಎ. (೩೭ವ), ಹಾಗೂ ಸೀತಂಗೋಳಿ ರಾಜೀವಗಾಂಧಿ ಕಾಲೋನಿಯ ಅಬ್ದುಲ್ ನಿಝಾರ್‌ರವರನ್ನು ವಶಕ್ಕೆ ಪಡೆದು ದಸ್ತಗಿರಿ ಮಾಡಿದ್ದಾರೆ.
ಆರೋಪಿಗಳಿಂದ ಸುಲಿಗೆ ಮಾಡಿದ ರೂ. ೫೦,೦೦೦/-ಮೌಲ್ಯದ ತುಂಡಾದ ಚಿನ್ನದ ಕರಿಮಣಿ ಸರ ಹಾಗೂ ಬದಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ ಎಫ್ ಝಡ್ ಬೈಕ್ ಮತ್ತು ಪ್ರಕರಣಕ್ಕೆ ಉಪಯೋಗಿಸಿದ ಕೆಂಪು ಬಣ್ಣದ ರಾಯಲ್ ಎನ್‌ಫೀಲ್ಡ್ ಬೈಕ್‌ನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿತರನ್ನು ಹೆಚ್ಚಿನ ವಿಚಾರಣೆ ಮಾಡಿದಾಗ ೨೦೧೯ರಲ್ಲಿ ವಿಟ್ಲ ಠಾಣಾ ವ್ಯಾಪ್ತಿಯ ಕುದ್ದುಪದವು ಜಗನ್ನಾಥ ಶೆಟ್ಟಿರವರ ಮಾಲಕತ್ವದ ಪೆಟ್ರೋಲ್ ಪಂಪ್ ಕಳ್ಳತನ ಪ್ರಕರಣ, ವಿಟ್ಲ ಠಾಣಾ ವ್ಯಾಪ್ತಿಯ ಕಾಶಿಮಠ ಎಂಬಲ್ಲಿ ಗೂಡ್ಸ್ ಟೆಂಪೋ ಕಳ್ಳತನ ಪ್ರಕರಣ ಮತ್ತು ಪುತ್ತೂರು ನಗರ ಠಾಣಾ ವ್ಯಾಪ್ತಿಯ ಬೈಪಾಸ್ ರಸ್ತೆಯಲ್ಲಿ ಮಹಿಳೆಯ ಸರ ಕಳ್ಳತನ ನಡೆಸಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಈ ಆರೋಪಿತರ ಪೈಕಿ ಫಝಲ್ ಎ. ಫೈಜಲ್ ಪಗ್ಗು ಎಂಬಾತನ ವಿರುದ್ಧ ಮಂಗಳೂರು ನಗರದ ಉಳ್ಳಾಲ, ಮಂಜೇಶ್ವರ, ಕುಂಬ್ಳೆ, ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲವು ಕಳ್ಳತನ ಪ್ರಕರಣವು ದಾಖಲಾಗಿರುತ್ತದೆ.
ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಪೊಲೀಸು ಅಧೀಕ್ಷಕ ಋಷಿಕೇಶ್ ಸೋನಾವಣೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ್ ಚಂದ್ರರವರ ಮಾರ್ಗದರ್ಶನದಲ್ಲಿ ಪೊಲೀಸು ಉಪಾಧೀಕ್ಷಕಿ ಡಾ.ಗಾನಾ ಪಿ. ಕುಮಾರ್ ಪುತ್ತೂರು ಉಪವಿಭಾಗರವರ ನೇತೃತ್ವದಲ್ಲಿ ಪುತ್ತೂರು ಗ್ರಾಮಾಂತರ ವೃತ್ತದ ಪೊಲೀಸು ವೃತ್ತ ನಿರೀಕ್ಷಕ ಉಮೇಶ್ ಯು, ಪೊಲೀಸು ಉಪನಿರೀಕ್ಷಕರುಗಳಾದ ಉದಯರವಿ ಎಂ. ಹಾಗೂ ರಾಮಕೃಷ್ಣ ಜಿ.ಸಿ ಮತ್ತು ವಿಶೇಷ ತಂಡದ ಸಿಬ್ಬಂದಿಗಳಾದ ದೇವರಾಜ್, ಧರ್ಣಪ್ಪ ಗೌಡ, ಅದ್ರಾಮ್, ಸತೀಶ್, ಪ್ರವೀಣ್, ವರ್ಗೀಸ್, ಜಗದೀಶ್, ಹರ್ಷಿತ್, ಚಾಲಕ ಸದ್ದಾಂ ಮುಲ್ಲಾರವರು ಹಾಗು ಜಿಲ್ಲಾ ಗಣಕಯಂತ್ರದ ಸಿಬ್ಬಂದಿಗಳಾದ ಸಂಪತ್, ದಿವಾಕರ್‌ರವರು ಸಹಕರಿಸಿದ್ದಾರೆ.




