ಸುಳ್ಯ: ಮಾರಣಾಂತಿಕವಾಗಿ ಹಲ್ಲೆಗೊಳಗಾದ ಮಸೂದ್ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತ್ಯು
ಸುಳ್ಯ: ಬೆಳ್ಳಾರೆ ಸಮೀಪದ ಕಳಂಜದಲ್ಲಿ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ತಂಡದಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾದ ಮಸೂದ್(18) ಚಿಕಿತ್ಸೆ ಫಲಿಸದೆ ಗುರುವಾರ ಮಧ್ಯಾಹ್ನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೂಲತಃ ಕಾಸರಗೋಡು ಜಿಲ್ಲೆಯ ಮೊಗ್ರಾಲ್ ಪುತ್ತೂರು ನಿವಾಸಿಯಾಗಿದ್ದ ಮಸೂದ್ ಮೇಲೆ ಜೂ.19ರಂದು ರಾತ್ರಿ ಕಳಂಜ ಗ್ರಾಮದ ವಿಷ್ಣು ನಗರ ಎಂಬಲ್ಲಿ ಎಂಟು ಮಂದಿಯ ತಂಡವೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿತ್ತು.
ಈ ವೇಳೆ ತಲೆಗೆ ಸೋಡಾ ಬಾಟಲಿಯ ಏಟು ಬಿದ್ದಿದ್ದರಿಂದ ಗಂಭೀರಾವಸ್ಥೆಗೆ ತಲುಪಿದ್ದ ಮಸೂದ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳದಿದ್ದಾರೆ.
ಕಳಂಜ ನಿವಾಸಿಗಳಾದ ಸುನೀಲ್, ಸುಧೀರ್, ಶಿವ, ಸದಾಶಿವ, ರಂಜಿತ್, ಅಭಿಲಾಷ್, ಜಿಮ್ ರಂಜಿತ್ ಹಾಗೂ ಭಾಸ್ಕರ ಎಂಬವರು ಹಲ್ಲೆ ಆರೋಪಿಗಳಾಗಿದ್ದು, ಅವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.




