February 2, 2026

ಬೈಂದೂರು: ಮಹಿಳೆಯೊಬ್ಬರು ಕಾರು ಸಹಿತ ಸುಟ್ಟು ಹೋದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಅದು ಅಪಘಾತವಲ್ಲ ಮಹಿಳೆಯ ಕೊಲೆ

0
IMG-20220713-WA0038.jpg

ಬೈಂದೂರು: ಮಹಿಳೆಯೊಬ್ಬರನ್ನು ಕಾರು ಸಹಿತ ಸುಟ್ಟು ಕೊಲೆ ಮಾಡಿರುವ ಘಟನೆ ಬೈಂದೂರು ತಾಲೂಕಿನ ಒತ್ತಿನೆಣೆ ಸಮೀಪದ ಹೇನ ಬೇರು ಎಂಬಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ಮೃತರನ್ನು ಕಾರ್ಕಳದ ಶಿಲ್ಪಾ ಎಂದು ಗುರುತಿಸಲಾಗಿದೆ.

ಕಾರಿನ ಮಾಲಕನನ್ನು ಕಾರ್ಕಳದ ಸದಾನಂದ ಶೇರಿಗಾರ್ (54) ಎಂದು ಗುರುತಿಸಲಾಗಿದೆ. ಗುತ್ತಿಗೆ ಆಧಾರದಲ್ಲಿ ಸರ್ವೆಯರ್ ಕೆಲಸ ನಿರ್ವಹಿಸುತ್ತಿದ್ದ ಈತನೇ ಮಹಿಳೆಯನ್ನು ಕೊಲೆ ಮಾಡಿ ಪರಾರಿಯಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಬೈಂದೂರು- ಶಿರೂರು ರಾಷ್ಟ್ರೀಯ ಹೆದ್ದಾರಿ 66ರ ಸಮೀಪದ ಹೇನಬೇರು ಎಂಬಲ್ಲಿಗೆ ತೆರಳುವ ರಸ್ತೆಯಲ್ಲಿ ಬುಧವಾರ ಬೆಳಗ್ಗೆ ಸಂಪೂರ್ಣ ಸುಟ್ಟು ಹೋದ ಸ್ಥಿತಿಯಲ್ಲಿ ಕಾರು ಹಾಗೂ ಕಾರಿನೊಳಗೆ ಹಿಂಬದಿ ಸೀಟಿನಲ್ಲಿ ತಲೆಬುರುಡೆ ಕಾಣುವ ರೀತಿಯಲ್ಲಿ ಮೃತದೇಹವೊಂದು ಪತ್ತೆಯಾಗಿತ್ತು. ಪೋರ್ಡ್ ಐಕಾನ್ ಕಂಪೆನಿಯ ಕಾರು, ಚೇಸ್ಸಿಸ್ ಹಾಗೂ ಎಂಜಿನ್ ನಂಬರ್ ಕೂಡ ಗುರುತಿಸಲಾಗದಷ್ಟು ಸುಟ್ಟು ಹೋಗಿತ್ತು.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಘಟನಾ ಸ್ಥಳದಲ್ಲಿ ಪೆಟ್ರೋಲ್ ತುಂಬಿಸಿ ಖಾಲಿಯಾಗಿರುವ ಬಾಟಲಿಗಳು ಪತ್ತೆಯಾಗಿದ್ದವು. ಈ ಮೂಲಕ ಇದೊಂದು ಕೊಲೆ ಎಂಬುದಾಗಿ ಮನಗಂಡ ಪೊಲೀಸರು ಆ ದಿಕ್ಕಿನಲ್ಲಿ ತನಿಖೆ ಕೈಗೆತ್ತಿಕೊಂಡರು.

ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು, ಕಾರಿನ ಆರ್‌ಸಿ ಮಾಲಕನ ಸದಾನಂದ ಶೇರಿಗಾರ್‌ನ ಹೆಸರು, ವಿಳಾಸ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು.

ಸದಾನಂದ ಶೇರಿಗಾರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಆತನಿಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಕೊಲೆಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಕೆ.ಶ್ರೀಕಾಂತ್, ಬೈಂದೂರು ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ಎಸ್ಸೈ ಪವನ್ ನಾಯ್ಕ್ ಹಾಗೂ ಫೊರೆನ್ಸಿಕ್ ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹದ ಮರಣೋತ್ತರ ಪರೀಕ್ಷೆ ಮಣಿಪಾಲ ಆಸ್ಪತ್ರೆಯಲ್ಲಿ ನಡೆಸಲಾಗಿದೆ.

“ಪ್ರಕರಣದ ಆರೋಪಿ ಹಾಗೂ ಮೃತ ಮಹಿಳೆಯ ಗುರುತು ಪತ್ತೆ ಹಚ್ಚಲಾಗಿದ್ದು, ಕಾರಿನ ಮಾಲಕನೇ ಕೊಲೆ ಮಾಡಿರುವ ಬಗ್ಗೆ ತನಿಖೆಯಿಂದ ತಿಳಿದು ಬಂದಿದೆ. ತಲೆಮರೆಸಿಕೊಂಡಿರುವ ಆರೋಪಿಗಾಗಿ ಶೋಧ ಕಾರ್ಯ ನಡೆಸ ಲಾಗುತ್ತಿದೆ. ಅದಕ್ಕಾಗಿ ತನಿಖಾಧಿಕಾರಿ ಬೈಂದೂರು ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ನೇತೃತ್ವದಲ್ಲಿ ಗಂಗೊಳ್ಳಿ ಹಾಗೂ ಬೈಂದೂರು ಎಸ್ಸೈಗಳ ಎರಡು ತಂಡಗಳನ್ನು ರಚಿಸಲಾಗಿದೆ” ಎಂದು ಉಡುಪಿಯ ಹೆಚ್ಚುವರಿ ಎಸ್ಪಿ ಎಸ್.ಟಿ.ಸಿದ್ಧಲಿಂಗಪ್ಪ, ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!