ದೇವಸ್ಥಾನದಲ್ಲಿ ಆದಿವಾಸಿ ಮಹಿಳೆಗೆ ಊಟ ನಿರಾಕರಣೆ:
ಆಕೆಯ ಮನೆಗೆ ಭೇಟಿ ನೀಡಿದ ತಮಿಳುನಾಡು ಸಿಎಂ
ತಮಿಳುನಾಡು: ಮಾಮಲ್ಲಪುರಂ ದೇವಸ್ಥಾನದಲ್ಲಿ ಇತ್ತೀಚೆಗೆ ಊಟ ನಿರಾಕರಿಸಲಾಗಿದ್ದ ನರಿಕುರವರ್ ಅಲೆಮಾರಿ ಸಮುದಾಯದ ಮಹಿಳೆ ಅಶ್ವಿನಿ ಅವರನ್ನು ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಗುರುವಾರದಂದು ಭೇಟಿ ಮಾಡಿದ್ದಾರೆ. ಮಹಿಳೆಯ ಮನೆಗೆ ತೆರಳಿದ ಮುಖ್ಯಮಂತ್ರಿ ಅವರೊಂದಿಗೆ ಕೆಲಕಾಲ ಮಾತನಾಡಿದರು.
ನರಿಕುರವರ್ ಮತ್ತು ಇರುಳರ್ ಸಮುದಾಯ ವಾಸಿಸುವ ಮಾಮಲ್ಲಪುರಂ ಬಳಿಯ ಪೂಂಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸ್ಟಾಲಿನ್ 81 ಜನರಿಗೆ ವಸತಿ ಹಕ್ಕುಪತ್ರ ವಿತರಿಸಿದ್ದಾರೆ. 10 ಲಕ್ಷ ವೆಚ್ಚದ ಅಂಗನವಾಡಿ ಮತ್ತು ಪಂಚಾಯತ್ ಯೂನಿಯನ್ ಶಾಲೆಗಳನ್ನು ನಿರ್ಮಿಸಲು ಮತ್ತು ಇತರ ಅಭಿವೃದ್ಧಿ ಕಾರ್ಯಕ್ರಮಗಳ ಆದೇಶಗಳನ್ನು ಸಹ ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಅಶ್ವಿನಿ ಅವರು, “ಮುಖ್ಯಮಂತ್ರಿಗಳಿಗೆ ಧನ್ಯವಾದಗಳು, ನಾವು ಈಗ ಮತದಾರರ ಗುರುತಿನ ಚೀಟಿ, ಆಧಾರ್ ಮತ್ತು ಕುಟುಂಬ ಪಡಿತರ ಚೀಟಿಗಳನ್ನು ಪಡೆದುಕೊಂಡಿದ್ದೇವೆ. ಇದು ಕನಸಿನಂತೆ ಭಾಸವಾಗುತ್ತಿದೆ. ಸಾಮಾನ್ಯವಾಗಿ ಸರ್ಕಾರಿ ಕಚೇರಿಗಳಲ್ಲಿ ಪಡಿತರ ಚೀಟಿ ಪಡೆಯಲು ನಾಲ್ಕು ತಿಂಗಳು ಹರಸಾಹಸ ಪಡಬೇಕಾದ ನಮಗೆ ನೇರವಾಗಿ ಅವರಿಂದಲೇ ಎರಡೇ ದಿನದಲ್ಲಿ ಕಾರ್ಡ್ ಸಿಕ್ಕಿದೆ. ನಾನು ಸಚಿವ ಶೇಖರ್ ಬಾಬು ಅವರನ್ನು ಭೇಟಿಯಾದಾಗ, ನಮ್ಮನ್ನು ಇಲ್ಲಿಂದ ಹೊರಹಾಕುತ್ತಾರೋ ಎಂಬ ಭಯದಲ್ಲಿ ಇಲ್ಲಿ ಪ್ರತಿದಿನ ನಾವು ವಾಸಿಸುತ್ತಿದ್ದೇವೆ ಎಂದು ಹೇಳಿದ್ದೆ. ಈಗ ನಮ್ಮಲ್ಲಿ ಪತ್ರಗಳಿವೆ, ನಮಗೆ ಆ ಭಯವಿಲ್ಲ” ಎಂದು ಹೇಳಿದ್ದಾರೆ.




