ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಆಲ್ ರೌಂಡರ್ ಡ್ವೇಯ್ನ್ ಬ್ರಾವೋ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ
ಅಬುಧಾಬಿ: ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಹಿರಿಯ ಆಲ್ ರೌಂಡರ್ ಡ್ವೇಯ್ನ್ ಬ್ರಾವೋ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ. ಐಸಿಸಿ ಟಿ20 ವಿಶ್ವಕಪ್ ನ ಕೊನೆಯ ಪಂದ್ಯದ ಬಳಿಕ ತಾನು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರವಾಗುತ್ತಿರುವುದಾಗಿ ಅವರು ಹೇಳಿದ್ದಾರೆ.
ಲಂಕಾ ವಿರುದ್ಧದ ಗುರುವಾರದ ಪಂದ್ಯದ ಬಳಿಕ ಡ್ವೇಯ್ನ್ ಬ್ರಾವೋ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆಸೀಸ್ ವಿರುದ್ಧ ನಡೆಯಲಿರುವ ಸೂಪರ್ 12ನ ಅಂತಿಮ ಪಂದ್ಯವೇ ಡ್ವೇಯ್ನ್ ಬ್ರಾವೋರ ಅಂತಾರಾಷ್ಟ್ರೀಯ ವೃತ್ತಿ ಜೀವನದ ಕೊನೆಯ ಪಂದ್ಯವಾಗಿರಲಿದೆ.
38 ವರ್ಷದ ಬ್ರಾವೋ ಅವರು ಈ ಹಿಂದೆ ನಿವೃತ್ತಿ ಘೋಷಿಸಿದ್ದರು. ಆದರೆ ಟಿ20 ವಿಶ್ವಕಪ್ ಸಲುವಾಗಿ 2019 ರಲ್ಲಿ ನಿವೃತ್ತಿಯಿಂದ ಹೊರಬಂದಿದ್ದರು. ಎಲ್ಲಾ ಏಳು ಟಿ20 ವಿಶ್ವಕಪ್‌ಗಳಲ್ಲಿ ಕಾಣಿಸಿಕೊಂಡಿರುವ ಆಲ್‌ರೌಂಡರ್ ಬ್ರಾವೋ, 2012 ಮತ್ತು 2016 ರಲ್ಲಿ ವೆಸ್ಟ್ ಇಂಡೀಸ್ ಟ್ರೋಫಿಯನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವಿಂಡೀಸ್ ಪರವಾಗಿ 90 ಟಿ20 ಪಂದ್ಯಗಳನ್ನಾಡಿರುವ ಬ್ರಾವೋ, ಲೀಗ್ ಗಳನ್ನು ಸೇರಿ ಒಟ್ಟಾರೆ 500 ಕ್ಕೂ ಹೆಚ್ಚು ಪಂದ್ಯಗಳನ್ನಾಡಿದ್ದಾರೆ.




