ಬಂಟ್ವಾಳದಲ್ಲಿ ಭಾರೀ ಮಳೆ: 5 ಮೀ.ನಲ್ಲಿ ಹರಿಯುತ್ತಿರುವ ನೇತ್ರಾವತಿ ನದಿ
ಬಂಟ್ವಾಳ: ನೆರೆ ಬಾಧಿತ ಪಟ್ಟಣವಾಗಿ ಗುರುತಿಸಿಕೊಂಡಿರುವ ಬಂಟ್ವಾಳ ಸುತ್ತಮುತ್ತಲ ಪ್ರದೇಶದಲ್ಲಿ ಹರಿಯುವ ನೇತ್ರಾವತಿ ನದಿ ನೀರಿನ ಅಪಾಯಕಾರಿ ಮಟ್ಟ 8 ಮೀ. ಆಗಿದ್ದು, ಧಾರಾಕಾರವಾಗಿ ಮಳೆಯಾಗುತ್ತಿದ್ದರೂ ಸದ್ಯಕ್ಕೆ ನೇತ್ರಾವತಿಯು 5 ಮೀ. ನಲ್ಲಿ ಹರಿಯುತ್ತಿರುವ ಕಾರಣ ಯಾವುದೇ ಆತಂಕವಿಲ್ಲವಾಗಿದೆ.
ಮಳೆಯಿಂದಾಗಿ ಮಂಚಿ ಗ್ರಾಮದ ಪುರುಷೋತ್ತಮ ಅವರ ಮನೆಯ ಬಳಿಯ ಆವರಣ ಗೋಡೆ ತೋಟಕ್ಕೆ ಕುಸಿದು, ಕೃಷಿ ಹಾನಿ ಉಂಟಾಗಿದೆ. ಅದೇ ಗ್ರಾಮದ ನಿರ್ಬೈಲು ಮಸೀದಿಯ ತಡೆಗೋಡೆ ಹಮೀದ್ ಅವರ ತೋಟದ ಬಳಿಯ ತೋಡಿಗೆ ಬಿದ್ದು ತೋಟಕ್ಕೆ ನೀರು ನುಗ್ಗಿದೆ. ತಾಲೂಕಿನಾದ್ಯಂತ ಬೆಳಗ್ಗಿನಿಂದಲೇ ವ್ಯಾಪಕ ಮಳೆಯಾಗುತ್ತಿದೆ.
ಆದರೆ ನೀರಿನ ಮಟ್ಟದಲ್ಲಿ ಏರಿಕೆಯಾಗುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕೆ ಅತಿ ಅಗತ್ಯವಾಗಿದೆ. ವ್ಯಾಪಕ ಮಳೆಯ ಪರಿಣಾಮ ಕಾಮಗಾರಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಲ್ಲಡ್ಕ, ಸೂರಿಕುಮೇರು ಪ್ರದೇಶದಲ್ಲಿ ಸಂಪೂರ್ಣ ನೀರಿನಿಂದ ತುಂಬಿ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.