ಪುತ್ತೂರು: ಅಪಘಾತದರಲ್ಲಿ ಮೃತಪಟ್ಟ ಯುವಕನ ಮನೆಯವರಿಗೆ 10 ಲಕ್ಷ ರೂ. ವಿಮಾ ಮೊತ್ತವನ್ನು ಹಸ್ತಾಂತರಿಸಿದ ಕರ್ಣಾಟಕ ಬ್ಯಾಂಕ್
ಪುತ್ತೂರು: ಬ್ಯಾಂಕ್ ಉಳಿತಾಯ ಖಾತೆಗೆ ವಿಮಾ ಸೌಲಭ್ಯ ಪಡಕೊಂಡಿದ್ದ ಯುವಕ ಅಪಘಾತವೊಂದರಲ್ಲಿ ಮೃತಪಟ್ಟ ಹಿನ್ನಲೆಯಲ್ಲಿ ಆತನ ಮನೆಯವರಿಗೆ ರೂ. 10 ಲಕ್ಷ ವಿಮಾ ಮೊತ್ತವನ್ನು ಬ್ಯಾಂಕ್ ಹಸ್ತಾಂತರಿಸಿದೆ.
ಉಪ್ಪಿನಂಗಡಿ ನಿವಾಸಿ ಆಶಿಕ್ ಮನೆಯವರಿಗೆ ವಿಮಾ ಮೊತ್ತದ ಚೆಕ್ ಅನ್ನು ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ ಇತ್ತೀಚೆಗೆ ಹಸ್ತಾಂತರಿಸಲಾಯಿತು.
2021ರ ನವೆಂಬರ್ 14ರಂದು ಬಂಟ್ವಾಳ ತಾಲ್ಲೂಕು ತುಂಬೆಯ ರಾಮಲ್ಕಟ್ಟೆ ಎಂಬಲ್ಲಿ ಸಂಭವಿಸಿದ ಪಿಕ್ಅಪ್ ವಾಹನ ಅಪಘಾತದಲ್ಲಿ ಉಪ್ಪಿನಂಗಡಿ ನಟ್ಟಿಬೈಲು ನಿವಾಸಿ ಆಶಿಕ್ ಹಾಗೂ ಬೆಳ್ತಂಗಡಿ ತಾಲ್ಲೂಕು ಬಾರ್ಯ ಗ್ರಾಮದ ನಿವಾಸಿ ಚೇತನ್ ಮೃತಪಟ್ಟಿದ್ದರು. ಇವರಿಬ್ಬರು ಬಾಲ್ಯ ಸ್ನೇಹಿತರಾಗಿದ್ದು, ಕಡು ಬಡತನದ ಕುಟುಂಬಕ್ಕೆ ಸೇರಿದವರು. ಕ್ಯಾಟರಿಂಗ್ ಆಹಾರವನ್ನು ಸಮಾರಂಭವೊಂದಕ್ಕೆ ಸಾಗಿಸಿ ವಾಪಸ್ಸು ಬರುತ್ತಿದ್ದಾಗ ಈ ಅಪಘಾತ ಸಂಭವಿಸಿತ್ತು.
ಈ ಇಬ್ಬರು ಯುವಕರು ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿದ್ದರು. ಆಶಿಕ್ ಅವರಿಗೆ ಕೆಬಿಎಲ್ ಸುರಕ್ಷಾ ಅಪಘಾತ ವಿಮಾ ಸೌಲಭ್ಯ ಇತ್ತು. ವಾರ್ಷಿಕ 150 ರೂಪಾಯಿ ಪಾವತಿಸುತ್ತಿದ್ದರು. ಚೇತನ್ ಈ ಸೌಲಭ್ಯ ನಿರಾಕರಿಸಿದ್ದರು.
ಬ್ಯಾಂಕ್ ಶಾಖೆಯಲ್ಲಿ ಶಾಖಾಧಿಕಾರಿ ಮುರಳಿ ಆರ್. ಶ್ಯಾಮ್ ಭಟ್ ಅವರು ಆಶಿಕ್ ತಾಯಿ ಮಮತಾ ಅವರಿಗೆ ವಿಮೆ ಮೊತ್ತದ ಚೆಕ್ ಹಸ್ತಾಂತರಿಸಿದರು. ಸಹಾಯಕ ವ್ಯವಸ್ಥಾಪಕ ಫ್ಲೇವಿಟ್ ಶೈನಿ ಫರ್ನಾಂಡಿಸ್, ವಿಮಾ ಸಂಸ್ಥೆಯ ಪ್ರಸನ್ನ ದೇವಾಡಿಗ ಈ ಸಂದರ್ಭ ಉಪಸ್ಥಿತರಿದ್ದರು




