ಉಡುಪಿ: ಉದ್ಯಮಿ ಅದಾನಿಗೆ ಸೇರಿದ ಯುಪಿಸಿಎಲ್‌ಗೆ 52 ಕೋಟಿ ರೂ. ದಂಡ
ಬೆಂಗಳೂರು: ಪರಿಸರಕ್ಕೆ ಹಾನಿ ಮಾಡಿದ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಕಾರ್ಯಾಚರಿಸುತ್ತಿರುವ ಉದ್ಯಮಿ ಅದಾನಿಯವರಿಗೆ ಸೇರಿದ ಯುಪಿಸಿಎಲ್‌ಗೆ ಚೆನ್ನೈಯ ದಕ್ಷಿಣ ವಲಯದ ಹಸಿರು ಪೀಠವು ರೂ.52 ಕೋಟಿಯಷ್ಟು ದಂಡ ವಿಧಿಸಿದೆ.
ಗೌತಮ್ ಆದಾನಿ ಗ್ರೂಪ್ ಒಡೆತನದಲ್ಲಿ ಕಾರ್ಯಚರಿಸುತ್ತಿರುವ ಉಡುಪಿಯ ಪಡುಬಿದ್ರೆ ಸಮೀಪ ಎಲ್ಲೂರು ಗ್ರಾಮದಲ್ಲಿರುವ ಕಲ್ಲಿದ್ದಲು ಆಧಾರಿತ ಉಷ್ಣವಿದ್ಯುತ್ ಸ್ಥಾವರದಿಂದ ಸುಮಾರು 10 ಕಿ.ಮೀ. ವ್ಯಾಪ್ತಿಯಲ್ಲಿ ಪರಿಸರಕ್ಕೆ ಧಕ್ಕೆ ಬಂದಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗಿದೆ.
ಪಡುಬಿದ್ರಿ ಸಮೀಪದ ಎಲ್ಲೂರಿನಲ್ಲಿರುವ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರ ಯುಪಿಸಿಎಲ್ ಕಾರ್ಖಾನೆಯಿಂದ ಸುತ್ತಮುತ್ತಲಿನ ಪರಿಸರ ಹಾಗೂ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಿದೆ ಎಂದು ಜನಜಾಗೃತಿ ಸಮಿತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ರಾಷ್ಟ್ರೀಯ ಹಸಿರು ಪೀಠ (ದಕ್ಷಿಣ ವಲಯ) ಮೇ 31ರಂದು ತೀರ್ಪು ನೀಡಿದ್ದು, ರೂ. 52,02,50,000 ಪರಿಸರ ಹಾನಿ ಪರಿಹಾರ ಪಾವತಿಸುವಂತೆ ಯುಪಿಸಿಎಲ್ ಕಂಪೆನಿಗೆ ಆದೇಶಿಸಿದೆ.
2005ರಿಂದಲೂ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ನಡೆದಿತ್ತು. ಸುದೀರ್ಘ ವಿಚಾರಣೆ ಬಳಿಕ ಎನ್‌ಜಿಟಿ ಅಂತಿಮ ತೀರ್ಪು ನೀಡಿದ್ದು, ಕಂಪೆನಿಯ 10 ಕಿ.ಮೀ ವ್ಯಾಪ್ತಿಯಲ್ಲಿ ಉಂಟಾಗಿರುವ ಪರಿಸರ ಹಾನಿಗೆ ಪ್ರತಿಯಾಗಿ ನಷ್ಟ ಪರಿಹಾರ ಭರಿಸುವಂತೆ ಸೂಚನೆ ನೀಡಿದೆ.