ಅಪ್ರಾಪ್ತ ಬಾಲಕಿಯ ಅಪಹರಿಸಿ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ:
ಆರೋಪಿಗೆ ಮರಣದಂಡನೆ ಶಿಕ್ಷೆ ಪ್ರಕಟ
ಉತ್ರರ ಪ್ರದೇಶ: ತಿಂಗಳ ಹಿಂದೆ ಅಪ್ರಾಪ್ತ ಬಾಲಕಿಯೊಬ್ಬಳನ್ನು ಅಪಹರಿಸಿ, ಅತ್ಯಾಚಾರ ಮಾಡಿ ಹತ್ಯೆಗೈದಿದ್ದ ವ್ಯಕ್ತಿಯೊಬ್ಬನಿಗೆ ಉತ್ತರ ಪ್ರದೇಶದ ಬಹ್ರೈಚ್‌ನ ನ್ಯಾಯಾಲಯ ಮಂಗಳವಾರ ಮರಣದಂಡನೆ ವಿಧಿಸಿ, ಆತನ ಸಹಚರನಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಏಪ್ರಿಲ್ 10 ರಂದು ಬಹ್ರೈಚ್ ಜಿಲ್ಲೆಯ ಕೊಳದ ಬದಿಯಲ್ಲಿ 12 ವರ್ಷದ ಬಾಲಕಿಯ ಶವ ಪತ್ತೆಯಾಗಿದೆ. ಫೊರೆನ್ಸಿಕ್ ತನಿಖೆಯು ಬಾಲಕಿಯ ಅತ್ಯಾಚಾರ ಮತ್ತು ಕತ್ತು ಹಿಸುಕಿರುವುದನ್ನು ದೃಢಪಡಿಸಿದೆ ಎಂದು ಸರ್ಕಾರಿ ವಕೀಲ (ಪೋಕ್ಸೊ ಕಾಯ್ದೆ) ಸಂತ ಪ್ರತಾಪ್ ಸಿಂಗ್ ಹೇಳಿದ್ದಾರೆ.
ಬಾಲಕಿಯ ಮನೆಯಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದ ಟ್ರ್ಯಾಕ್ಟರ್ ಚಾಲಕ ಫೂಲಚಂದ್ (30) ಎಂಬಾತನನ್ನು ಅಪಹರಣ, ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ಬಂಧಿಸಿದ್ದರು.
ನಂತರ ತನಿಖೆಯ ಸಮಯದಲ್ಲಿ, ಫೂಲ್‌ಚಂದ್ ಅವರ ಸ್ನೇಹಿತ ರೋಷನ್ ಲಾಲ್ (29) ಕೂಡ ಘಟನೆಯಲ್ಲಿ ಭಾಗಿಯಾಗಿರುವುದು ದೃಢಪಟ್ಟ ನಂತರ ಅವರನ್ನು ಬಂಧಿಸಲಾಯಿತು.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ (ಪೋಕ್ಸೊ ಕಾಯ್ದೆ) ನಿತಿನ್ ಪಾಂಡೆ ಅವರು 122 ಪುಟಗಳ ತೀರ್ಪಿನಲ್ಲಿ ಫೂಲ್‌ಚಂದ್‌ಗೆ ಗಲ್ಲು ಶಿಕ್ಷೆ ಮತ್ತು ₹ 40,000 ದಂಡ ವಿಧಿಸಿದರು.
ನ್ಯಾಯಾಲಯವು ರೋಷನ್ ಲಾಲ್‌ಗೆ ₹ 10,000 ದಂಡ ಮತ್ತು 20 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು. ದಂಡ ಪಾವತಿಸಲು ವಿಫಲವಾದರೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.