ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಯ ಹತ್ಯೆ ಪ್ರಕರಣ: ಇಬ್ಬರಿಗೆ ಮರಣದಂಡನೆ ಶಿಕ್ಷೆ ಪ್ರಕಟ
ಉತ್ತರ ಪ್ರದೇಶ: ಆರು ವರ್ಷಗಳ ಹಿಂದೆ ನಡೆದಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಹಿರಿಯ ಅಧಿಕಾರಿ ತಂಝಿಲ್ ಅಹ್ಮದ್ ಹಾಗೂ ಅವರ ಪತ್ನಿ ಫರ್ಜಾನಾ ಅವರ ಹತ್ಯೆಯ ಅಪರಾಧಿಗಳಿಗೆ ಮರಣದಂಡನೆ ವಿಧಿಸಲಾಗಿದೆ.
2016 ಏಪ್ರಿಲ್ 2ರ ಮಧ್ಯರಾತ್ರಿ ಈ ಹತ್ಯೆ ನಡೆದಿತ್ತು. ಅಪರಾಧಿಗಳಾದ ಮುನೀರ್ ಹಾಗೂ ಆತನ ಸಹಚರ ರೆಹಾನ್ ಎಂಬುವವರಿಗೆ ಬಿಜ್ನೋರ್‌ನ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ವಿಜಯ್ ಕುಮಾರ್ ಅವರು ಗಲ್ಲು ಶಿಕ್ಷೆ ವಿಧಿಸಿದ್ದಾರೆ.
ಅಹ್ಮದ್ ಅವರು ಪಠಾಣ್‌ಕೋಟ್ ದಾಳಿಯ ತನಿಖೆ ನಡೆಸುತ್ತಿದ್ದ NIA ತಂಡದ ಭಾಗವಾಗಿದ್ದರು ಮತ್ತು SIMI ಮತ್ತು IM ಮಾಡ್ಯೂಲ್‌ಗಳಿಗೆ ಸಂಬಂಧಿಸಿದ ಪ್ರಕರಣಗಳ ಭಾಗವಾಗಿದ್ದರು.
ಈ ಬಗ್ಗೆ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ ಧರಂವೀರ್ ಸಿಂಗ್, ಬಿಜ್ನೋರ್‌ನ ಸಯೋಹರಾದಲ್ಲಿ ನಡೆದ ವಿವಾಹ ಸಮಾರಂಭದಿಂದ ಸಹಸ್‌ಪುರದ ತಮ್ಮ ಮನೆಗೆ ಮಕ್ಕಳೊಂದಿಗೆ ಮರಳುತ್ತಿದ್ದಾಗ ತಂಝಿಲ್ ಅಹ್ಮದ್ ಮತ್ತು ಅವರ ಪತ್ನಿ ಫಾರ್ಜಾನಾ ಅವರನ್ನು ದುಷ್ಕರ್ಮಿಗಳು ರಸ್ತೆಯ ಮೋರಿ ಬಳಿ ಕಾರಿಗೆ ಹೊಂಚು ಹಾಕಿ ಗುಂಡಿಕ್ಕಿ ಕೊಂದಿದ್ದರು. ತನಿಖೆಯ ಬಳಿಕ ಇತರ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಲಾಗಿತ್ತು.
ಮುನೀರ್ ವಿರುದ್ಧ ದೆಹಲಿ ಮತ್ತು ಉತ್ತರ ಪ್ರದೇಶದ ಇತರ ಪ್ರದೇಶಗಳಲ್ಲಿ ಒಟ್ಟು 33 ಪ್ರಕರಣಗಳು ದಾಖಲಾಗಿವೆ. ಮುನೀರ್ ರಾಜ್ಯ ಮಟ್ಟದ ಕ್ರಿಮಿನಲ್ ಆಗಿದ್ದು, ಉತ್ತರ ಪ್ರದೇಶದ ಟಾಪ್ 10 ವಾಂಟೆಡ್ ಲಿಸ್ಟ್ ನಲ್ಲಿ ಸೇರಿದ್ದಾನೆ.




