ಅಯೋಧ್ಯೆ ರಾಮಮಂದಿರದ ಹೆಸರಲ್ಲಿ ನಕಲಿ ಪ್ರಸಾದ ಮಾರಾಟ: ಅಮೆಜಾನ್‌ಗೆ 1 ಲಕ್ಷ ರೂ. ದಂಡ
ನವದೆಹಲಿ: ಸಾಮಾನ್ಯ ಸಿಹಿತಿಂಡಿಗಳನ್ನು ‘ಶ್ರೀ ರಾಮಮಂದಿರ ಅಯೋಧ್ಯಾ ಪ್ರಸಾದ’ ಎಂದು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಅವಕಾಶ ನೀಡಿದ್ದಕ್ಕಾಗಿ ಇ-ಕಾಮರ್ಸ್ ದೈತ್ಯ ಅಮೆಜಾನ್ ಕಂಪನಿಗೆ ಕೇಂದ್ರೀಯ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು ₹1 ಲಕ್ಷ ದಂಡ ವಿಧಿಸಿದೆ.
ತಾನು ಕೇವಲ ಮಧ್ಯವರ್ತಿ ವೇದಿಕೆ ಎಂದು ಹೇಳಿ ಅಮೆಜಾನ್ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಾಧಿಕಾರ ಕಟ್ಟುನಿಟ್ಟಾಗಿ ಆದೇಶಿಸಿದೆ.
ಚಂದು ಟ್ರೇಡಿಂಗ್ ಕಂಪನಿಯ ‘ಬಿಹಾರಿ ಬ್ರದರ್ಸ್’ ಬ್ರ್ಯಾಂಡ್‌ನಡಿ ತುಪ್ಪದ ಲಾಡು, ಖೋವಾ ಲಾಡು, ಬೂಂದಿ ಲಾಡು ಹಾಗೂ ಹಸುವಿನ ಹಾಲಿನ ಪೇಡಾಗಳನ್ನು ‘ಶ್ರೀ ರಾಮಮಂದಿರ ಅಯೋಧ್ಯಾ ಪ್ರಸಾದ’ ಮತ್ತು ‘ಶ್ರೀರಾಮನ ಆಶೀರ್ವಾದ’ ಎಂಬ ವಿವರಣೆಯೊಂದಿಗೆ ಅಮೆಜಾನ್‌ನಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆದರೆ, ಈ ಸಿಹಿತಿಂಡಿಗಳನ್ನು ಮಾರಾಟ ಮಾಡಲು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಿಂದ ಯಾವುದೇ ಅಧಿಕೃತ ಅನುಮತಿ ಪಡೆದಿರಲಿಲ್ಲ. ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (CAIT) ನೀಡಿದ ದೂರಿನನ್ವಯ ತನಿಖೆ ನಡೆಸಿದ ಸಿಸಿಪಿಎ, ಮುಂದಿನ 15 ದಿನಗಳ ಒಳಗೆ ₹1 ಲಕ್ಷ ದಂಡದ ಮೊತ್ತವನ್ನು ಪಾವತಿಸುವಂತೆ ಅಮೆಜಾನ್‌ಗೆ ನಿರ್ದೇಶಿಸಿದೆ.
ಸಿಸಿಪಿಎ ಮುಖ್ಯ ಆಯುಕ್ತರಾದ ನಿಧಿ ಖರೆ ಮತ್ತು ಆಯುಕ್ತ ಅನುಪಮ್ ಮಿಶ್ರಾ ಅವರಿದ್ದ ಪೀಠವು ಈ ವಿಚಾರಣೆ ನಡೆಸಿದೆ. ದೇವಾಲಯದ ಹೆಸರನ್ನು ಬಳಸಿಕೊಂಡು ಮಾರಾಟ ಮಾಡಿದಾಗ ಗ್ರಾಹಕರು ಹಾಗೂ ಭಕ್ತರು ಅದನ್ನು ನಿಜವಾದ ಪ್ರಸಾದವೆಂದೇ ನಂಬಿ ಖರೀದಿಸುತ್ತಾರೆ. ಅನುಮತಿಯಿಲ್ಲದೆ ಈ ರೀತಿ ವಾಣಿಜ್ಯ ಉದ್ದೇಶಕ್ಕೆ ಧಾರ್ಮಿಕ ಕೇಂದ್ರಗಳ ಹೆಸರನ್ನು ಬಳಸುವುದು ಲಕ್ಷಾಂತರ ಭಕ್ತರ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಪ್ರಾಧಿಕಾರ ಅಭಿಪ್ರಾಯಪಟ್ಟಿದೆ.





