August 19, 2026

ಕೆಸಿಎಫ್ ಆಶ್ರಯದಲ್ಲಿ ಯಶಸ್ವಿಯಾಗಿ ನೆರವೇರಿದ ಪುಣ್ಯ ಮದೀನಾ ಝಿಯಾರತ್

0
image_editor_output_image-171103131-1787147114897

ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ತ್ವಾಇಫ್ ಸೆಕ್ಟರ್‌ನ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಪುಣ್ಯ ಮದೀನಾ ಝಿಯಾರತ್ ಯಾತ್ರೆಯು ಅಲ್ಲಾಹನ ಅಪಾರ ಅನುಗ್ರಹದಿಂದ ಅತ್ಯಂತ ಯಶಸ್ವಿಯಾಗಿ ನೆರವೇರಿತು.



ಐವತ್ತು ಮಂದಿ ಯಾತ್ರಿಕರನ್ನು ಒಳಗೊಂಡ ಈ ಪುಣ್ಯ ತಂಡವು ಆಗಸ್ಟ್ 13ರ ಗುರುವಾರ ಸಂಜೆ ತ್ವಾಇಫ್‌ನ ಫಹದ್ ಮಸ್ಜಿದ್ ನಿಂದ – ಮದೀನಾದತ್ತ ಪ್ರಯಾಣ ಬೆಳೆಸಿತು. ಪವಿತ್ರ ಯಾತ್ರೆಯುದ್ದಕ್ಕೂ ಯಾತ್ರಿಕರಿಗೆ ಅಗತ್ಯವಾದ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಪ್ರಯಾಣ, ಮದೀನಾದಲ್ಲಿನ ವಾಸ್ತವ್ಯ, ಆಹಾರ ಪೂರೈಕೆ ಸೇರಿದಂತೆ ಪ್ರತಿಯೊಂದು ವ್ಯವಸ್ಥೆಯೂ ಅತ್ಯಂತ ಅಚ್ಚುಕಟ್ಟಾಗಿ ಹಾಗೂ ಉತ್ತಮ ರೀತಿಯಲ್ಲಿ ನಡೆದಿರುವುದಕ್ಕೆ ಯಾತ್ರಿಕರಿಂದ ಮೆಚ್ಚುಗೆ ವ್ಯಕ್ತವಾಯಿತು

.
ಈ ಯಾತ್ರೆಯ ಮತ್ತೊಂದು ವಿಶೇಷವೆಂದರೆ, ಪವಿತ್ರ ರಬೀಉಲ್ ಅವ್ವಲ್ ತಿಂಗಳ ಪ್ರಥಮ ದಿನವೇ ತಂಡವು ಪುಣ್ಯ ಮದೀನತುಲ್ ಮುನವ್ವರವನ್ನು ತಲುಪಿದ್ದು. ಪ್ರವಾದಿ ಮುಹಮ್ಮದ್ ( ಸ) ಅವರ ಪವಿತ್ರ ನಗರಿಯಲ್ಲಿ ರಬೀಉಲ್ ಅವ್ವಲ್‌ನ ಆಗಮನವನ್ನು ಸ್ವಾಗತಿಸುವ ಸೌಭಾಗ್ಯ ಯಾತ್ರಿಕರಿಗೆ ವಿಶೇಷ ಆಧ್ಯಾತ್ಮಿಕ ಅನುಭವವನ್ನು ನೀಡಿತು.


ಅದೇ ರೀತಿ, ಮದೀನಾದಿಂದ ನಿರ್ಗಮಿಸುವ ಸಂದರ್ಭದಲ್ಲಿ ಭಾರತದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದೇಶಭಕ್ತಿಯ ಸಂದೇಶ ಸಾರುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಯಾತ್ರೆಯ ಮತ್ತೊಂದು ವಿಶೇಷತೆಯಾಗಿತ್ತು. ಧಾರ್ಮಿಕ ಭಾವನೆಯೊಂದಿಗೆ ದೇಶಪ್ರೇಮವನ್ನೂ ಮೇಳೈಸಿದ ಈ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. 


ಯಾತ್ರೆಯಲ್ಲಿ  ಕ್ವಿಝ್ ಕಾರ್ಯಕ್ರಮ ಕೂಡಾ ನಡೆಸಲಾಗಿದ್ದು ಅದರಲ್ಲಿ ನಲ್ವತ್ತು ಮಂದಿ ಬಹಳ ಉತ್ಸಾಹದಿಂದ ಭಾಗವಹಿಸಿದ್ದರು. ಒಟ್ಟಿನಲ್ಲಿ, ಈ ಯಾತ್ರೆಯು ಎಲ್ಲಾ ವಿಧದಲ್ಲೂ ಅರ್ಥಪೂರ್ಣ ಹಾಗೂ ರಸವತ್ತಾಗಿದ್ದು ಇನ್ನೂ ಇಂತಹ ಯಾತ್ರೆಯನ್ನು ಆಯೋಜಿಸುತ್ತಲೇ ಇರಬೇಕೆಂದು ಯಾತ್ರಿಕರು ಮನವಿ ಮಾಡಿದರು.


ಪವಿತ್ರ ಮದೀನಾ ಝಿಯಾರತ್‌ನ ಸೌಭಾಗ್ಯವನ್ನು ಐವತ್ತು ಮಂದಿ ಯಾತ್ರಿಕರಿಗೆ ಕಲ್ಪಿಸಿ, ಅವರ ಪ್ರಯಾಣವನ್ನು ಸುಗಮ ಹಾಗೂ ಸ್ಮರಣೀಯವಾಗಿಸುವಲ್ಲಿ ಶ್ರಮಿಸಿದ ಕೆಸಿಎಫ್ ತ್ವಾಇಫ್ ಸೆಕ್ಟರ್‌ನ ಎಲ್ಲಾ ಕಾರ್ಯಕರ್ತರು, ಸಂಘಟಕರು ಹಾಗೂ ಸಹಕರಿಸಿದ ಪ್ರತಿಯೊಬ್ಬರಿಗೂ ಯಾತ್ರಿಕರು ಕೃತಜ್ಞತೆ ಸಲ್ಲಿಸಿದರು.

Leave a Reply

Your email address will not be published. Required fields are marked *

error: Content is protected !!