ಹಾಸ್ಯ ನಟಿ ಸುನೇತ್ರಾ ಪಂಡಿತ್ ಸ್ಕೂಟರ್ ಅಪಘಾತ: ಆಸ್ಪತ್ರೆಗೆ ದಾಖಲು
ಬೆಂಗಳೂರು: ಜನಪ್ರಿಯ ನಟಿ, ಡಬ್ಬಿಂಗ್ ಕಲಾವಿದೆ ಸುನೇತ್ರಾ ಪಂಡಿತ್ ಶೂಟಿಂಗ್ ಮುಗಿಸಿ ಮನೆಗೆ ತೆರಳುತ್ತಿದ್ದಾಗ ದ್ವಿಚಕ್ರ ವಾಹನ ಅಪಘಾತವಾಗಿ, ನಟಿಯ ತಲೆಗೆ ಪೆಟ್ಟು ಬಿದ್ದಿದ್ದು, ತಲೆಗೆ ಹೆಲ್ಮೆಟ್ ಹಾಕಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ.
ಬಸವನಗುಡಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ 12: 30ರ ಸುಮಾರಿಗೆ ಈ ಘಟನೆ ನಡೆದಿದ್ದು, ರಸ್ತೆ ಹಂಪ್ ದಾಟುವಾಗ ಬೈಕ್‌ನಿಂದ ಆಯತಪ್ಪಿ ಬಿದ್ದು ಸುನೇತ್ರಾ ಗಾಯಗೊಂಡಿದ್ದಾರೆ.
ಇನ್ನು ಸುನೇತ್ರಾರನ್ನು ತಕ್ಷಣವೇ ರಕ್ಷಿಸಿದ ಸ್ಥಳೀಯರು ಸಮೀಪದ ಬಿಎಂಎಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದು, ಅವೈಜ್ಞಾನಿಕ ಹಂಪ್ ಕಾಣದೆ ಬೈಕ್ ಜಂಪ್ ಆಗಿದ್ದರಿಂದ ಈ ದುರ್ಘಟನೆ ನಡೆದಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ನರಸಿಂಹರಾಜ ಕಾಲೋನಿಯ 9ನೇ ಮುಖ್ಯರಸ್ತೆಯಲ್ಲಿರುವ ಹಂಪ್ ಹಾರಿಸಿ, ಆಯತಪ್ಪಿ ಬಿದ್ದ ನಟಿ ಸುನೇತ್ರಾ ತಲೆ ಪೆಟ್ಟಾದರೂ ಬಚಾವಾಗಿದ್ದಾರೆ. ಹೆಲ್ಮೆಟ್ ಹಾಕಿದ್ದ ಪರಿಣಾಮ ತಲೆಗೆ ಸ್ವಲ್ಪ ಪೆಟ್ಟಾಗಿದ್ದು, ಸಣ್ಣ ಪುಟ್ಟ ಗಾಯಗಳಾಗಿವೆ. ನಟಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಆಘಾತದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.




