ಉಪ್ಪಿನಂಗಡಿ: ಸಾಕುದನ ಕೊಂಡೊಯ್ಯುತ್ತಿದ್ದ ವೇಳೆ ಮಾಂಗಲ್ಯ ಸರ ಕಿತ್ತು ಮಾರಣಾಂತಿಕ ಹಲ್ಲೆ: ಪ್ರಕರಣ ದಾಖಲು
ನೆಲ್ಯಾಡಿ: ಸಾಕುದನವನ್ನು ನಮ್ಮ ಮನೆಗೆ ಕೊಂಡೊಯ್ಯುತ್ತಿದ್ದ ಕೆಲಸದಾತನ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಪ್ರಶ್ನಿಸಿದ ವೇಳೆ ನನ್ನ ಕುತ್ತಿಗೆ ಹಾಗೂ ತಲೆಗೆ ಕೈಯಿಂದ ಮತ್ತು ಯಾವುದೋ ಚೈನ್‌ನಿಂದ ನನ್ನ ಎಡಕೈ ತೋಳಿಗೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ನಿವಾಸಿ ಶಿಜು ಎಂಬವರ ಪತ್ನಿ ಬಿಜಿ ಎಂ.,(39ವ.) ಎಂಬವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಮಹಿಳೆಯ ದೂರಿನ ಮೇರೆಗೆ ಮಹೇಶ್ ಹಾಗೂ ಇತರ ಮೂವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೆರಿಯಶಾಂತಿಯ ಇಚ್ಲಂಪಾಡಿ ಕ್ರಾಸ್‌ನಲ್ಲಿರುವ ನಮ್ಮ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಕುಮಾರ್ ಎಂಬವರು ಎ.27ರಂದು ರಾತ್ರಿ 7.30ರ ವೇಳೆಗೆ ಪೆರಿಯಶಾಂತಿಯಲ್ಲಿರುವ ನಮ್ಮ ಅಂಗಡಿಯಿಂದ ನಮ್ಮ ಸಾಕುದನವನ್ನು ಮಣ್ಣಗುಂಡಿಯಲ್ಲಿರುವ ನಮ್ಮ ಮನೆಗೆ ಹೆದ್ದಾರಿಯಲ್ಲಿ ಕೊಂಡು ಹೋಗುತ್ತಿರುವಾಗ ಮಹೇಶ್ ಮತ್ತು ಇತರ ಮೂವರು ಬಂದು ಕುಮಾರ್‌ನನ್ನು ತಡೆದು ಹಲ್ಲೆ ನಡೆಸುತ್ತಿರುವ ಬಗ್ಗೆ ಲೋಕೇಶ್ ಎಂಬವರು ನನಗೆ ಮಾಹಿತಿ ನೀಡಿದ್ದರು. ಅದರಂತೆ ನಾನು ಮೋಹನ್ ಎಂಬವರ ಅಟೋ ರಿಕ್ಷಾದಲ್ಲಿ ಸ್ಥಳಕ್ಕೆ ಹೋದಾಗ ಕುಮಾರ್‌ರವರಿಗೆ ಮಹೇಶ್ ಮತ್ತು ಇತರರು ಹಲ್ಲೆ ನಡೆಸುತ್ತಿರುವುದನ್ನು ನೋಡಿ ಯಾಕೆ ಹಲ್ಲೆ ನಡೆಸುತ್ತಿದ್ದೀರಿ ಎಂದು ಕೇಳಿದಾಗ ಅವರ ಪೈಕಿ ಓರ್ವ ನನ್ನ ಟೀಶರ್ಟ್ ಅನ್ನು ಹಿಡಿದು ಕುತ್ತಿಗೆ ಮತ್ತು ತಲೆಗೆ ಕೈಯಿಂದ ಹಲ್ಲೆ ನಡೆಸಿದ್ದಾನೆ. ಈ ಸಮಯ ನನ್ನ ಮಾಂಗಲ್ಯ ಸರ ಮತ್ತು ಓಲೆ ಕೆಳಗೆ ಬಿದ್ದಿರುತ್ತದೆ. ಬಳಿಕ ಯಾವುದೋ ಚೈನ್‌ನಿಂದ ನನ್ನ ಎಡಕೈ ತೋಳಿಗೆ ಹಲ್ಲೆ ನಡೆಸಿದ್ದಾರೆ ಎಂದು ಬಿಜಿ ಆರೋಪಿಸಿದ್ದಾರೆ.
ಆರೋಪಿತರು ಚಿಕಿತ್ಸಾ ವೆಚ್ಚ ಭರಿಸುವುದಾಗಿ ಹೇಳಿ ಚಿಕಿತ್ಸಾ ವೆಚ್ಚ ಭರಿಸದೇ ಇದ್ದುದರಿಂದ ಎ.30ರಂದು ತಡವಾಗಿ ದೂರು ನೀಡಿರುತ್ತೇನೆ ಎಂದು ಉಪ್ಪಿನಂಗಡಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಬಿಜಿಯವರು ತಿಳಿಸಿದ್ದಾರೆ.