ಉಡುಪಿ: ಬಾವಿಯಿಂದ ನೀರನ್ನು ಸೇದುತ್ತಿರುವಾಗ ಆಯತಪ್ಪಿ ಬಿದ್ದು ಮಹಿಳೆ ಮೃತ್ಯು
ಬೈಂದೂರು: ಬಾವಿಯಿಂದ ನೀರನ್ನು ಸೇದುತ್ತಿರುವಾಗ ಆಯತಪ್ಪಿ ಬಾವಿಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಬೈಂದೂರು ಠಾಣಾ ವ್ಯಾಪ್ತಿಯ ಪಡುವರಿ ಗ್ರಾಮದಲ್ಲಿ ನಿನ್ನೆ ನಡೆದಿದೆ.
ಇಮಿಲಿಯಾ ನಜ್ರೇತ್ (75) ಮೃತಪಟ್ಟ ದುರ್ದೈವಿ.
ಇಮಿಲಿಯಾ ನಜ್ರೇತ್ ನಿನ್ನೆ ಮದ್ಯಾಹ್ನ 1.45 ರ ವೇಳೆಗೆ ಮನೆಯ ಕಂಪೌಂಡ್ ನ ಒಳಗೆ ಇರುವ ಬಾವಿಯಿಂದ ನೀರು ಸೇದುತ್ತಿರುವಾಗ ಅಕಸ್ಮಾತ್ ಆಗಿ ನೀರಿಗೆ ಬಿದ್ದಿದ್ದಾರೆ.
ಈ ವೇಳೆ ಸನಿಹದಲ್ಲೇ ಇದ್ದ ಪ್ರದೀಪ್‌ರವರು ತಕ್ಷಣವೇ ಬಾವಿಗೆ ಇಳಿದು, ಬಾವಿಯಿಂದ ಮಹಿಳೆಯನ್ನು ಮೇಲಕ್ಕೆ ಎತ್ತಿ ಕೂಡಲೇ ಚಿಕಿತ್ಸೆಗೆಂದು ಬೈಂದೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಅಲ್ಲಿ ಪರೀಕ್ಷಿಸಿದ ವೈದ್ಯರು ಮಹಿಳೆ ಮೃತಪಟ್ಟಿರುವುದಾಗಿ ತಿಳಿಸಿದ್ದು, ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





