ಮಂಗಳೂರು: ನಿರ್ಮಾಣ ಹಂತದ ಕಟ್ಟಡದ ಸ್ಲ್ಯಾಬ್ ಕುಸಿದು ಕಾರ್ಮಿಕ ಮೃತ್ಯು, ಇನ್ನಿಬ್ಬರು ಗಂಭೀರ ಗಾಯ
ಮಂಗಳೂರು: ನಗರದ ಉರ್ವ ಮಾರಿಗುಡಿ ಬಳಿ ನಿಮಿಸುತ್ತಿರುವ ನಿರ್ಮಾಣ ಹಂತದ ಕಟ್ಟಡದ ಸ್ಲ್ಯಾಬ್ ಕುಸಿದು ಒಬ್ಬ ಕಾರ್ಮಿಕ ಮೃತಪಟ್ಟಿದ್ದಾರೆ, ಇನ್ನಿಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಗೋವಾದ ಸಲೀಂ ಶೇಖ್ (45) ಮೃತಪಟ್ಟ ಕಾರ್ಮಿಕ. ಕಾವೂರು ಸಮೀಪದ ಪಂಜಿಮೊಗರು ನಿವಾಸಿ ಕಿರಣ್ ಮತ್ತು ಶಿವಮೊಗ್ಗ ಜಿಲ್ಲೆಯ ಸೊರಬದ ಹನುಮಂತ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುಜರಾತ್ ಮೂಲದ ಉದ್ಯಮಿಗೆ ಸೇರಿದ ಜಾಗದಲ್ಲಿ ಮನೆ ನಿರ್ಮಾಣವಾಗುತ್ತಿದೆ. ನಿನ್ನೆ ಕಾಂಕ್ರೀಟ್ ಸ್ಲ್ಯಾಬ್‌ಗೆ ಸಪೋರ್ಟ್ ನೀಡಿದ್ದ ಕಂಬಗಳನ್ನು ತೆರವು ಮಾಡುತ್ತಿದ್ದಾಗ ಏಕಾಏಕಿ ಸ್ಲ್ಯಾಬ್ ಕುಸಿದು ನೆಲಕ್ಕೆ ಅಪ್ಪಳಿಸಿದೆ.
ಘಟನೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಸಲೀಂ ಶೇಖ್ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ವೈದ್ಯರು ಪರೀಕ್ಷೆ ನಡೆಸಿ ಮೃತಪಟ್ಟಿರುವುದಾಗಿ ಘೋಷಿಸಿದರು.
ಉರ್ವ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದು, ಕಟ್ಟಡ ನಿರ್ಮಾಣಕ್ಕೆ ತಡೆ ನೀಡಿದ್ದಾರೆ. ಕಟ್ಟಡ ಕಾಮಗಾರಿಯ ಲೋಪದಿಂದಾಗಿ ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ.





