ಪಿಎಸ್ಸೈ ನೇಮಕಾತಿ ಪರೀಕ್ಷೆಯಲ್ಲಿ ಹಗರಣ: ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಸೇರಿದಂತೆ ಮೂವರು ಆರೋಪಿಗಳ ಬಂಧನ
ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಭಾರೀ ಹಗರಣಕ್ಕೆ ಸಂಬಂಧಿಸಿದಂತೆ ಲೇಡಿ ಕಿಂಗ್ ಪಿನ್ ಆರೋಪಿ ದಿವ್ಯಾ ಹಾಗರಗಿ ಸೇರಿದಂತೆ ಮೂವರು ಆರೋಪಿಗಳ ಬಂಧನವಾಗಿದೆ. ಕಳೆದ ಮಧ್ಯರಾತ್ರಿ ನಡೆದ ಸಿಐಡಿ ಪೊಲೀಸರ ಕಾರ್ಯಾಚರಣೆಯಲ್ಲಿ ಬಂಧನವಾಗಿದ್ದು, ಬಂಧಿತರನ್ನು ದಿವ್ಯಾ ಹಾಗರಗಿ, ಸುನಿತಾ ಮತ್ತು ಅರ್ಚನಾ ಎಂದು ಗುರುತಿಸಲಾಗಿದೆ.
ಸಿಐಡಿ ಮೂಲಗಳು ಇದನ್ನು ಖಚಿತಪಡಿಸಿದ್ದು, ಇತರ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು ಅಕ್ರಮದಲ್ಲಿ ಅವರ ಪಾತ್ರ ಕಂಡುಬಂದರೆ ಅವರನ್ನು ಕೂಡ ಬಂಧಿಸಲಾಗುವುದು ಎಂದು ಹೇಳಿದ್ದಾರೆ.
ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮದ ಆರೋಪ ಕೇಳಿಬಂದು ಕಳೆದ 18 ದಿನಗಳಿಂದ ದಿವ್ಯಾ ಹಾಗರಗಿ ಮತ್ತು ಗ್ಯಾಂಗ್ ತಲೆಮರೆಸಿಕೊಂಡಿದ್ದರು. ಸರ್ಕಾರ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿದಾಗಿನಿಂದ ಮೂರು ತಂಡಗಳಾಗಿ ರಚನೆ ಮಾಡಿದ್ದ ಸಿಐಡಿ ತಂಡ ಕೊನೆಗೂ ದಿವ್ಯಾ ಹಾಗರಗಿ ಮತ್ತು ಅವರ ಗ್ಯಾಂಗ್ ನ್ನು ಕಳೆದ ರಾತ್ರಿ ಮಹಾರಾಷ್ಟ್ರದ ಪುಣೆಯಲ್ಲಿ ಹೊಟೇಲ್ ನಲ್ಲಿ ರಾತ್ರಿ ಊಟ ಮಾಡುತ್ತಿದ್ದ ವೇಳೆ ಬಂಧಿಸಿದರು.
ಕಲಬುರಗಿಯ ದಿವ್ಯಾ ಹಾಗರಗಿ ಮತ್ತು ಆಕೆಯ ಪತಿಯ ಒಡೆತನದ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಿಎಸ್ಐ ನೇಮಕಾತಿ ಪರೀಕ್ಷೆ ಕೇಂದ್ರವಿತ್ತು. ಈ ವೇಳೆ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ತಿಳಿದುಬಂದಿತ್ತು.




