ಕೆಲಸದಿಂದ ವಜಾ ಮಾಡಿದ ಮ್ಯಾನೇಜರ್ ಗೆ ಚಾಕುವಿನಿಂದ ಇರಿತ
ಬೆಂಗಳೂರು: ಸಂಸ್ಥೆಯ ನಿಯಮಗಳ ಪ್ರಕಾರ ಕೆಲಸದಿಂದ ವಜಾ ಮಾಡಿದ್ದಕ್ಕಾಗಿ ಮ್ಯಾನೇಜರ್ ಗೆ ವ್ಯಕ್ತಿಯೋರ್ವ ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ದೇಶದ ಮುಂಚೂಣಿಯಲ್ಲಿರುವ ಪೀಠೋಪಕರಣ ತಯಾರಿಕಾ ಕಂಪನಿ ಫೆದರ್ಲೈಟ್‌ನ 50 ವರ್ಷದ ಡೆಪ್ಯುಟಿ ಮ್ಯಾನೇಜರ್ ಮೇಲೆ ವಜಾಗೊಂಡ ಉದ್ಯೋಗಿಯೊಬ್ಬ ಚಾಕುವಿನಿಂದ ಹಲ್ಲೆ ನಡೆಸಿದ್ದು, ಅನಧಿಕೃತ ಗೈರುಹಾಜರಿಗಾಗಿ ಅವರ ಸೇವೆಯನ್ನು ಮೊದಲು ವಜಾಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಕಳೆದ ಗುರುವಾರ ಸಂಜೆ 4.45 ರ ಸುಮಾರಿಗೆ ಬಿಡದಿಯ ಹೆಜ್ಜಾಲ ಸರ್ಕಲ್‌ನಲ್ಲಿರುವ ಕಂಪನಿ ಆವರಣಕ್ಕೆ ಲಾರಿಗಳಿಗೆ ಗೇಟ್ ತೆರೆದಾಗ ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿ ಹರೀಶ್ ಗೌಡ (26) ಎಂಬಾತ ಸಂಸ್ಥೆಯ ಆವರಣ ಪ್ರವೇಶಿಸಿದ್ದ.
ಕಂಪನಿಯ ಮರಗೆಲಸ ವಿಭಾಗದಲ್ಲಿ ಸಣ್ಣ, ಅಂಟು ತುರಿಯುವ ಚಾಕುವನ್ನು ಹೊರತೆಗೆದು ಸಂತ್ರಸ್ತ ಆರ್ ಉಮೇಶ್ ಅವರ ಮುಖದ ಮೇಲೆ ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕಂಪನಿಯ ಮಾನವ ಸಂಪನ್ಮೂಲ ವ್ಯವಸ್ಥಾಪಕಿ ಕವಿತಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.




